– ಈ ಮೋದಿ ಭಾರತ ಮಾತೆಯ ಸೇವಕ ಅನ್ನೋದನ್ನ ಪಾಕಿಸ್ತಾನ ಮರೆತಿತ್ತು
– ಪಾಕ್‌ನ ವಾಯುನೆಲೆ ಐಸಿಯುನಲ್ಲಿದೆ, ಪ್ರತಿ ಭಯೋತ್ಪಾದಕ ದಾಳಿಗೂ ಬೆಲೆ ತೆರಬೇಕಾಗುತ್ತೆ; ಪ್ರಧಾನಿ
ಜೈಪುರ: ಈ ಮೋದಿ ಭಾರತ ಮಾತೆಯ ಸೇವಕ ಅನ್ನೋದನ್ನ ಪಾಕಿಸ್ತಾನ (Pakistan) ಮರೆತಿತ್ತು ಅನ್ನಿಸುತ್ತೆ. ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಹರಿಯುತ್ತಲೇ ಇರುತ್ತದೆ ಎಂಬುದನ್ನ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಪ್ರಧಾನಿ ಮೋದಿ (Narendra Modi) ಮತ್ತೊಮ್ಮೆ ಪಾಕ್ ವಿರುದ್ಧ ಗುಡುಗಿದ್ದಾರೆ.
ರಾಜಸ್ಥಾನದ ಬಿಕಾನೇರ್‌ನಲ್ಲಿ ಇಂದು ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದೊಂದಿಗೆ ಪಾಕಿಸ್ತಾನ ಎಂದಿಗೂ ನೇರವಾಗಿ ಯುದ್ಧ ಗೆದ್ದಿಲ್ಲ. ಅದಕ್ಕಾಗಿ ಭಯೋತ್ಪಾದನೆಯನ್ನು ಆಯುಧವಾಗಿ ಬಳಸುತ್ತಿದೆ. ಸ್ವಾತಂತ್ರ್ಯ ನಂತರ ದಶಕಗಳ ಕಾಲ ಇದು ಮುಂದುವರಿದಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡಿ, ಮುಗ್ಧ ಜನರನ್ನು ಕೊಂದಿತು ಮತ್ತು ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿತು. ನಮ್ಮ ಸೇನೆ ಅದಕ್ಕೆ ತಕ್ಕ ಉತ್ತರ ಕೊಟ್ಟಿದೆ ಎಂದಿದ್ದಾರೆ.
ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ ನಾವು ಭಯೋತ್ಪಾದಕರ ಒಂಬತ್ತು ದೊಡ್ಡ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದ್ದೇವೆ. ಸಿಂಧೂರವು (Sindoor) ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ರಕ್ತವಲ್ಲ, ನನ್ನ ರಕ್ತನಾಳಗಳಲ್ಲಿ ಸಿಂಧೂರ ಕುದಿಯುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಪಾಕಿಸ್ತಾನ ಬಿಕಾನೇರ್‌ನ ನಲ್ ವಿಮಾನ ನಿಲ್ದಾಣದ ಮೇಲೂ ದಾಳಿ ಮಾಡಲು ಪ್ರಯತ್ನಿಸಿತು, ಅದು ಸಾಧ್ಯವಾಗಲಿಲ್ಲ. ಆದ್ರೆ ಭಾರತದ ದಾಳಿಯಲ್ಲಿ ಪಾಕಿಸ್ತಾನದ ರಹೀಮ್ ಯಾರ್ ಖಾನ್ ವಾಯುನೆಲೆ ಹಾನಿಗೊಳಗಾಗಿದ್ದು, ಸದ್ಯ ಐಸಿಯುನಲ್ಲಿದೆ, ಯಾವಾಗ ಮತ್ತೆ ಕೆಲಸ ನಿರ್ವಹಿಸುತ್ತದೆ ಎಂದು ಹೇಳಲು ಅಸಾಧ್ಯ. ಪಾಕಿಸ್ತಾನ ಸೇನೆ ಮತ್ತು ಆರ್ಥಿಕತೆಯು ಪ್ರತಿಯೊಂದು ಭಯೋತ್ಪಾದಕ ದಾಳಿಗೆ ಬೆಲೆ ತೆರಬೇಕಾಗುತ್ತದೆ. ಅಲ್ಲದೇ ಇನ್ಮುಂದೆ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ. ಪಿಒಕೆ ಬಗ್ಗೆ ಮಾತ್ರ ಮಾತುಕತೆ ಇರುತ್ತದೆ ಎಂದು ಹೇಳಿದ್ದಾರೆ.