ಮುಂಬೈ: ಕರ್ನಾಟಕದಲ್ಲಿ ಮೋದಿ ಅಲೆ (Modi Wave) ಮುಗಿದಿದೆ. ಇನ್ನೇನಿದ್ದರೂ ನಮ್ಮದೇ ಹವಾ. ಬಜರಂಗ ಬಲಿ (Bajrang Bali) ಕಾಂಗ್ರೆಸ್ ಜೊತೆಗಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ (Sanjay Raut) ಕುಹಕವಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Result 2023) ಯಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಅಲೆ ಇದೆ ಎಂದು ಹೇಳುತ್ತಿದ್ದ ಬಿಜೆಪಿ(BJP) ಯವರಿಗೆ ಟಾಂಗ್ ನೀಡಿದ್ದಾರೆ. ಸದ್ಯ ಮೋದಿ ಅಲೆ ಮುಗಿದಿದೆ. ಇದೀಗ ನಮ್ಮದೇ ಹವಾ. ಈಗ ದೇಶದಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ ಎಂದರು.
ಕರ್ನಾಟಕ ಚುನಾವಣೆಯು ಇಡೀ ದೇಶದಲ್ಲಿ ಪಕ್ಷಕ್ಕೆ ಬಾಗಿಲು ತೆರೆದಿದೆ. ಕರ್ನಾಟಕದ ಜನರು ಸರ್ವಾಧಿಕಾರವನ್ನು ಹೇಗೆ ಸೋಲಿಸುತ್ತಾರೆ ಎಂಬುದನ್ನು ತೋರಿಸಿದ್ದಾರೆ. ನಾವು ಕರ್ನಾಟಕದ ಜನರಿಗೆ ಧನ್ಯವಾದಗಳನ್ನು ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಜರಂಗ ಬಲಿಯ ಬಗ್ಗೆ ಮಾತನಾಡಿದ ರಾವತ್, ಬಜರಂಗ ಬಲಿ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಖಂಡಿತವಾಗಿಯೂ ಭಾಗವಹಿಸಿದ್ದಾರೆ. ಆದರೆ ಅವರು ಸಾರ್ವಜನಿಕರೊಂದಿಗೆ ಪ್ರಚಾರ ಮಾಡಿದ್ದು, ಇದರಿಂದ ಕಾಂಗ್ರೆಸ್ (Congress) ಗೆದ್ದಿದೆ. ಅಂದರೆ ಬಜರಂಗ ಬಲಿ ಬಿಜೆಪಿಯೊಂದಿಗೆ ಅಲ್ಲ ಕಾಂಗ್ರೆಸ್ ಜೊತೆಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು. ಇದನ್ನೂ ಓದಿ: 2024ರ ಹೊತ್ತಿಗೆ ಬಿಜೆಪಿ ಅಂತ್ಯ ಶುರು: ಮಮತಾ ಬ್ಯಾನರ್ಜಿ
ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಜರಂಗ ಬಲಿ ವಿಚಾರ ಪ್ರಸ್ತಾಪವಾಗಿತ್ತು. ಪ್ರಣಾಳಿಕೆಯಲ್ಲಿ ಬಜರಂಗದಳ (BajrangDal) ವನ್ನು ನಿಷೇಧಿಸುವುದಾಗಿ ಘೋಷಿಸಿದ ನಂತರ ಕಾಂಗ್ರೆಸ್ ಹಿಂದೂ ಸಂಘಟನೆಗಳಿಂದ ದೊಡ್ಡ ಹಿನ್ನಡೆಯನ್ನು ಎದುರಿಸಿತು.