Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

Public TV
2 Min Read
Modi

ಮುಂಬೈ: ಏರ್‌ ಇಂಡಿಯಾ ವಿಮಾನ ಪತನಗೊಂಡು 241 ಮಂದಿ ಸಾವನ್ನಪ್ಪಿರುವ ಅಹಮದಾಬಾದ್‌ನ (Ahmedabad) ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಭೇಟಿ ನೀಡಲಿದ್ದಾರೆ.

ವಿಮಾನ ಪತನಗೊಂಡ (Plane Crash) ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದು, ಅಧಿಕಾರಿಗಳಿಂದ ದುರಂತದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಬದುಕುಳಿದ ಏಕೈಕ ಪ್ರಯಾಣಿಕನ ಆರೋಗ್ಯ ವಿಚಾರಿಸಲಿದ್ದಾರೆ. ನಿನ್ನೆಯೂ ಅವಘಡದ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿ, ವಿಮಾನ ಅಪಘಾತದ ಕುರಿತು ಮಾಹಿತಿ ಪಡೆದಿದ್ದರು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

Ahmedabad Plane Crash 1

ಇನ್ನೂ ದುರಂತದ ಬಗ್ಗೆ ಎಕ್ಸ್‌ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ (Air India) ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಎಲ್ಲರಿಗೂ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಲ್ಲದೇ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: 1.25 ಲಕ್ಷ ಲೀಟರ್‌ ಇಂಧನ ಇತ್ತು, ಮಧ್ಯಾಹ್ನ ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

Ahmedabad Planecrash 5

ಏನಿದು ದುರಂತ?
ಜೂನ್‌ 12ರಂದು (ಗುರುವಾರ) ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್‌ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.

Ahmedabad Air India Plane Crash 4

ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆಯಾಗಿದ್ದಾರೆ ಎಂದು ಏರ್‌ ಇಂಡಿಯಾ ಖಚಿತಪಡಿಸಿದೆ. ಇದನ್ನೂ ಓದಿ: Ahmedabad Plane Crash | ಮೊದಲ ಬಾರಿಗೆ ಪತಿ ನೋಡಲು ಹೊರಟಿದ್ದ ನವವಿವಾಹಿತೆ ಸಾವು 

Boeing 787 air india dreamliner

ಮೇ ಡೇ – ಕೊನೇ ಸಂದೇಶ
ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ ʻಮೇ ಡೇ.. ಮೇ ಡೇ..ʼ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು.

Share This Article