ಮಂಗಳೂರು/ಬೆಂಗಳೂರು: ಸಿಎಂ ಮೀನೂಟ ತಿಂದಿದ್ದ ಸುದ್ದಿಗೆ ಟಾಂಗ್ ನೀಡೋದಿಕ್ಕೆಂದೇ ಮೋದಿ ಶೂ ಟ್ರಾಲ್ ವಿಚಾರ ಫೇಸ್ ಬುಕ್ ನಲ್ಲಿ ಪ್ರಚಾರವಾಯಿತಾ ಎಂಬ ಸುದ್ದಿ ಈಗ ಎಲ್ಲರಲ್ಲೂ ಕಾಡಲಾರಂಭಿಸಿದೆ. ಯಾಕೆಂದರೆ ಮೋದಿ ಧರ್ಮಸ್ಥಳ ಮಂಜುನಾಥ ದೇವಸ್ಥಾನದೊಳಗಡೆ ಶೂ ಹಾಕಿಕೊಂಡು ಹೋಗಿಲ್ಲ. ಬೆಳಗ್ಗೆ ಕಾರಿನಲ್ಲೇ ದೇವಸ್ಥಾನದ ಮುಂಭಾಗಕ್ಕೆ ಬಂದ ಕಾರಿನಿಂದ ಮೋದಿ ಇಳಿದಿದ್ದಾರೆ. ಈ ವೇಳೆ ಅವರ ಕಾಲಿನಲ್ಲಿ ಶೂ ಇತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ಫೋಟೋದ ಸತ್ಯಾಸತ್ಯತೆ ಎಷ್ಟು ಎಂದು ಚೆಕ್ ಮಾಡಿದಾಗ ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿಯಿದು.
ಕಾರು ಇಳಿದ ಪ್ರಧಾನಿ ಮೋದಿ ನೇರವಾಗಿ ತಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮುಂದೆ ಆಗಮಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಮೋದಿಗೆ ಶೂ ಬಿಚ್ಚಲು ವ್ಯವಸ್ಥೆ ಮಾಡಲಾಗಿತ್ತು. ನಡೆಯುತ್ತಾ ಎಡಗಡೆಗೆ ಬಂದ ಮೋದಿ ಅಲ್ಲೇ ಶೂ ಬಿಚ್ಚಿ ವೀರೇಂದ್ರ ಹೆಗ್ಗಡೆಯವರ ಜೊತೆ ದೇವಸ್ಥಾನದೊಳಗಡೆ ಹೋಗುತ್ತಾರೆ. ಆದರೆ ಕಾರಿಳಿಯುತ್ತಾ ಹೋಗುವಾಗ ಹಾಕಿದ್ದ ಶೂ ಫೋಟೋವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆರಂಭವಾಗಿದೆ. ಆದರೆ ಮೋದಿ ಧರ್ಮಸ್ಥಳ ದೇವಸ್ಥಾನದ ಒಳಗಡೆ ಇರುವ ಫೋಟೋ ಕೂಡಾ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಮೋದಿಯವರು ಬರಿಗಾಲಲ್ಲೇ ದೇವರ ದರ್ಶನ ಪಡೆಯುತ್ತಿದ್ದಾರೆ.
Advertisement
Advertisement
ಮೋದಿ ಶೂ ವಿಚಾರದ ಸತ್ಯಾಸತ್ಯತೆ ಬಗ್ಗೆ ಪಬ್ಲಿಕ್ ಟಿವಿ ಧರ್ಮಸ್ಥಳ ದೇವಸ್ಥಾನದ ಪಾರುಪತ್ಯಗಾರರಾದ ಪಿ. ಲಕ್ಷ್ಮೀನಾರಾಯಣ ರಾವ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು. ಮೋದಿಯವರು ರಸ್ತೆಯಲ್ಲೇ ಚಪ್ಪಲಿ ಬಿಟ್ಟಿದ್ದಾರೆ. ಎಲ್ಲಾ ದಿನಗಳಲ್ಲಿ ದೇವಸ್ಥಾನದ ಸಿಬ್ಬಂದಿ, ಅರ್ಚಕರು ಮೋದಿ ಇಂದು ಶೂ ಬಿಚ್ಚಿದ ಜಾಗದಲ್ಲೇ ಚಪ್ಪಲಿ ಬಿಟ್ಟು ಹೋಗುತ್ತಾರೆ. ದೇವಸ್ಥಾನಕ್ಕೆ ಬರುವ ಸಾವಿರಾರು ಪ್ರವಾಸಿಗರಿಗೆ ಚಪ್ಪಲಿ ಇಡಲೆಂದೇ ಪ್ರತ್ಯೇಕ ಸ್ಟ್ಯಾಂಡ್ ವ್ಯವಸ್ಥೆ ಮಾಡಿದ್ದೇವೆ. ಯಾರೋ ತಲೆ ಕೆಟ್ಟವರು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾರಿಗಾದರೂ ಈ ವಿಚಾರದಲ್ಲಿ ಸಂದೇಹಗಳಿದ್ದರೆ ಅವರು ಆ ಸ್ಥಳಕ್ಕೆ ಬಂದು ಪ್ರಶ್ನಿಸಲಿ ಎಂದು ಲಕ್ಷ್ಮೀನಾರಾಯಣ ರಾವ್ ಹೇಳಿದ್ದಾರೆ.
Advertisement
ದೇವರ ಬಗ್ಗೆ ಇಷ್ಟು ನಂಬಿಕೆ ಇದ್ದವರು ಚಪ್ಪಲಿ ವಿಚಾರದಲ್ಲಿ ಚಿಂತಿಸುವುದಿಲ್ಲವೇ..? ಮೋದಿ ಶೂ ತೆಗೆದ ಜಾಗದಲ್ಲೇ ಶೂ ಬಿಚ್ಚಲು ಸ್ಥಳ ನಿಗದಿ ಮಾಡಲಾಗಿತ್ತು. ಪಕ್ಕದಲ್ಲೇ ಅವರಿಗೆ ಪೂರ್ಣಕುಂಭದ ಸ್ವಾಗತವನ್ನೂ ಮಾಡಲಾಗಿತ್ತು ಎಂದರು.
Advertisement
ಘಟನೆ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯಾಗಿದ್ದ ದೇವಸ್ಥಾನದ ಗಾರ್ಡ್ ಒಬ್ಬರು, ಮೋದಿಯವರು ದೆಹಲಿಯಿಂದ ಪಂಚೆ ಮತ್ತು ಶಲ್ಯ ತಗೊಂಡು ಬಂದಿದ್ದಾರೆ. ಧರ್ಮಸ್ಥಳದ ಸಂಸ್ಕಾರ ಏನು ಎಂಬುದನ್ನು ಫೋನ್ ಮೂಲಕ ತಿಳಿದುಕೊಂಡಿದ್ದರು. ಮೋದಿಯವರು ಶೂ ಧರಿದಿ ದೇವಸ್ಥಾನದ ಮೆಟ್ಟಿಲು ಹತ್ತಿಯೇ ಇಲ್ಲ ಎಂದು ಹೇಳಿದ್ದಾರೆ. ದೇವಸ್ಥಾನದವರು ಮೋದಿಗೆ ದೇವಾಲಯ ಪ್ರವೇಶಕ್ಕೆ ಶಲ್ಯ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಮೋದಿ ನಾನೇ ಶಲ್ಯ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿ ತಾವೇ ತಂದಿದ್ದ ಶಲ್ಯ ಬಳಸಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಕಾಡಿದ ಶ್ರೀ ಧರ್ಮಸ್ಥಳ ಮಂಜುನಾಥ ದರ್ಶನ ವಿವಾದ ಸದ್ಯ ಪ್ರಧಾನಿ ಮಂತ್ರಿ ಮೋದಿ ಅವರಿಗೂ ತಟ್ಟಿದ್ದಂತೂ ವಿಪರ್ಯಾಸ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಆದ್ರೆ ಅವರು ಮೀನು ಊಟ ಸೇವಿಸಿ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
https://youtu.be/eBOpJ4Fx-_U