ಚಿಕ್ಕಬಳ್ಳಾಪುರದಲ್ಲಿ ಮಾದರಿ ಗೋಶಾಲೆ ನಿರ್ಮಾಣಕ್ಕೆ ಸುಧಾಕರ್ ಚಾಲನೆ

Public TV
2 Min Read
chikkaballapur sudhakar

– ಗೋಸಂರಕ್ಷಣೆಗೆ ಮಹತ್ವದ ಯೋಜನೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನು ಜಾರಿಯಾದ ಬಳಿಕ, ಗೋವು ಸಂರಕ್ಷಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ದೊರೆತಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ಪಶುಸಂಗೋಪನಾ ಇಲಾಖೆಯಿಂದ ನಿರ್ಮಿಸಲುದ್ದೇಶಿಸಿರುವ ಗೋಶಾಲೆ ಕಾಮಗಾರಿಗೆ ಚಾಲನೆ ನೀಡಿದರು. ಈ ಹಿಂದೆಯೇ ರಾಜ್ಯ ಸರ್ಕಾರ ಗೋ ಸಂರಕ್ಷಣೆಗೆ ಆದ್ಯತೆ ನೀಡಿ ಕಠಿಣ ಕಾನೂನು ಜಾರಿ ಮಾಡಿದೆ. ಇದಕ್ಕೆ ಪೂರಕವಾಗಿ ಗೋಶಾಲೆಗಳನ್ನು ಸಹ ನಿರ್ಮಿಸಲಾಗಿದೆ. ಈ ಹಿನ್ನೆಲೆ ಇಂದು ಸುಧಾಕರ್ ಅವರು ರಾಜ್ಯದ ಮೊದಲ ಮಾದರಿ ಗೋಶಾಲೆ ಸ್ಥಾಪನೆಗೆ ಚಾಲನೆ ನೀಡಿದರು.

chikkaballapur sudhakar 2 1 e1630147384906

ಪ್ರಥಮ ಮಾದರಿ ಗೋಶಾಲೆ
ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ನಿರ್ಮಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರದ ಈ ಗೋಶಾಲೆ ರಾಜ್ಯದಲ್ಲಿಯೇ ಪ್ರಥಮ ಮಾದರಿ ಗೋಶಾಲೆಯಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಸಂತಸದ ವ್ಯಕ್ತಪಡಿಸಿದರು.

10 ಎಕರೆ ಪ್ರದೇಶದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಗೋಶಾಲೆ ನಿರ್ಮಾಣವಾಗಲಿದ್ದು, ವಯಸ್ಸಾದ, ರೋಗಗ್ರಸ್ಥ, ಅಂಗವಿಕಲ ಜಾನುವಾರುಗಳಿಗೆ ಪುನರ್ವಸತಿ ಕಲ್ಪಿಸಲಿದೆ. ಗೋಶಾಲೆಯ ಉಪ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳಿಗೆ ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಮೂಲಕ ಮಾರುಕಟ್ಟೆ ಕಲ್ಪಿಸಿ, ಸುಸ್ಥಿರ ಸಂಪನ್ಮೂಲದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

chikkaballapur sudhakar 2 2

ಗೋವು ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲು 50 ಲಕ್ಷ ರೂ. ನಿಗದಿಪಡಿಸಿದೆ. ನಾಗರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ.41ರಲ್ಲಿ 10 ಎಕರೆಯನ್ನು ಗೋಶಾಲೆಗೆ ಮೀಸಲಿಟ್ಟಿದ್ದು, 2021ರ ಅಕ್ಟೋಬರ್ 2 ರೊಳಗಾಗಿ ಇದನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಕೊಟ್ಟಿಗೆ, ಕೃಷಿ ಹೊಂಡ, ಮೇವು ಉತ್ಪಾದನೆ ಮೊದಲಾದ ಯೋಜನೆಗಳನ್ನು ಒಂದು ಮಾಡಲು ಉದ್ದೇಶಿಸಲಾಗಿದೆ.

ಗೋಶಾಲೆಯ ಉಪ ಉತ್ಪನ್ನಗಳನ್ನು ಖಾದಿ ಗ್ರಾಮೋದ್ಯೋಗ, ಕೆಎಂಎಫ್ ಅಥವಾ ಕೆಎಪಿಎಲ್ ನಿಂದ ಮಾರಾಟ ಮಾಡಿ, ಸಂಪನ್ಮೂಲ ಕ್ರೋಢೀಕರಣ ಮಾಡಲಾಗುತ್ತದೆ. ಗೋಶಾಲೆಯ ಸುಸ್ಥಿರತೆ, ನಿರ್ವಹಣೆಗೆ ಮೇವು ಬೆಳೆಯುವುದು, ಉತ್ಪನ್ನ ಮಾರಾಟ ಮಾಡಲು ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾನುವಾರುಗಳನ್ನು ನೋಡಿಕೊಳ್ಳಲು ಮುಂದೆ ಬಂದರೆ, ಅದಕ್ಕೂ ಅವಕಾಶವಿದೆ.

ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣಕ್ಕಾಗಿ ಪ್ರತಿ ಜಿಲ್ಲೆಗೆ ಮೊದಲ ಹಾಗೂ ಎರಡನೇ ಕಂತು ಸೇರಿ 24 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರ ಅಥವಾ ಸಂಸ್ಥೆಗಳಿಂದ ನಡೆಸುವ ಗೋಶಾಲೆಯಲ್ಲಿ ಪ್ರತಿ ಜಾನುವಾರು ವೆಚ್ಚ ದಿನಕ್ಕೆ 17.30 ರೂ. ನಿಗದಿಪಡಿಸಲಾಗಿದೆ. ಜಿಲ್ಲೆಯ ಒಟ್ಟು ಜಾನುವಾರು ಪೈಕಿ ಶೇ.0.75 ರಷ್ಟು ಜಾನುವಾರುಗಳಿಗೆ ಸ್ಥಳಾವಕಾಶ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. 2018ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 2,13,815 ದನಗಳು ಹಾಗೂ 26,397 ಎಮ್ಮೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *