ಕೊಲ್ಕತ್ತಾ: ಅಮ್ಮ ಮೊಬೈಲ್ ಫೋನ್ ಕಿತ್ತುಕೊಂಡಳು ಎಂದು ಕೋಪಗೊಂಡು 11ನೇ ತರಗತಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ವಯಸ್ಸಿನ ಹುಡುಗಿಯೊಬ್ಬಳು ಓದುವ ಕಡೆ ಗಮನಹರಿಸುತ್ತಿಲ್ಲ ಅಂತ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಜ್ಯೋತಿ ಶಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೊಬೈಲ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾಳೆ ಅಂತ ಈಕೆಗೆ ತಾಯಿ ಬೈದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ಏನಿದು ಪ್ರಕರಣ?: ಜ್ಯೋತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಪೋಷಕರು ಫೋನ್ ಕೊಡಿಸಿದ್ದರು. ಆದರೆ ಜ್ಯೋತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಳು. ಇದರಿಂದ ಆತಂಕಗೊಂಡ ಜ್ಯೋತಿ ತಾಯಿ, ಮಗಳು ಕಲಿಯುವ ಕಡೆ ಗಮನ ಕೊಡುವ ಬದಲು ಫೆಸ್‍ಬುಕ್ ಗೆ ಅಂಟಿಕೊಂಡಿದ್ದಾಳೆ ಅಂತ ಕಳೆದ ಮೂರು ದಿನಗಳ ಹಿಂದೆ ಫೋನ್ ಕಿತ್ತುಕೊಂಡು ಬೈದಿದ್ದರು. ಆದರೂ ಈಕೆ ಓದಿನ ಕಡೆ ನಿರ್ಲಕ್ಷ್ಯ ತೋರಿದ್ದಳು.
Advertisement
ಗುರುವಾರ ಸಂಜೆ ಮತ್ತೆ ತಾಯಿ ಫೋನ್ ಕಿತ್ತುಕೊಂಡು ಬೈದಿದ್ದಾರೆ. ನಂತರ ಈಕೆ ರೂಮಿಗೆ ಹೋಗಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ತಾಯಿ ಎಷ್ಟು ಬಾಗಿಲೂ ಬಡಿದರೂ ತೆರೆಯಲಿಲ್ಲ. ಕೊನೆಗೆ ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಮುರಿದಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಚಿತ್ತರಂಜನ್ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದ್ಯೊಯಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಜ್ಯೋತಿ ಮೃತಪಟ್ಟಿದ್ದಾಳೆ ಎಂದು ಜಿಲ್ಲಾಧಿಕಾರಿ ಕಲ್ಯಾಣ್ ಬ್ಯಾರ್ನಜಿ ಅವರು ತಿಳಿಸಿದರು.
Advertisement
ಕಳೆದ ಒಂದು ವಾರದಿಂದ ಅವಳು ಎಂದಿನಂತೆ ಚಟುವಟಿಕೆಯಿಂದ ಕೂಡಿರಲಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಕಠಿಣವಾಗಿ ಉತ್ತರ ನೀಡುತ್ತಿದ್ದಳು ಎಂದು ಜ್ಯೋತಿಯ ತಂದೆ ಕೃಷ್ಣ ಪ್ರಸಾದ್ ಶಾ ಹೇಳಿದ್ದಾರೆ.
Advertisement
ಈಗಿನ ಮಕ್ಕಳು ಜೊತೆಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಗಿಂತ ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚಿನ ಮಿತ್ರರು ಇದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ತಮ್ಮ ಮೊಬೈಲ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದ ಓದುವ ಮಕ್ಕಳು ಇಂದು ತಮ್ಮ ಭವಿಷ್ಯದ ಚಿಂತನೆಯನ್ನೂ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಮತ್ತು ಸ್ನೇಹಿತರು ಅವರ ಜೊತೆ ಹೆಚ್ಚಿನ ಕಾಲ ಬೆರೆತಾಗ ಅವರ ಮನಸ್ಥಿತಿಯನ್ನು ಬದಲಾಯಿಸಬಹುದು ಎಂದು ಮನಃ ಶಾಸ್ತ್ರಜ್ಞೆ ಮಾನ್ಸಿ ಜೋಶಿ ಅವರು ತಿಳಿಸಿದರು.
ಜ್ಯೋತಿ ಯಾವುದೇ ರೀತಿಯ ಡೆತ್ ನೋಟ್ ಬರೆದಿರಲಿಲ್ಲ. ಆಕೆಯ ಕುಟುಂದವರು ಕೂಡ ಆತ್ಮಹತ್ಯೆಗೆ ನಿಖರ ಕಾರಣ ತಿಳಿಸಿಲ್ಲ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.