ಬೆಂಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಹೆಚ್ಚಿದ್ದು, ಖಾಸಗಿ ಕಂಪನಿಗಳ ಜೊತೆಗೂಡಿ ಹೆಚ್ಚಿನ ಟವರ್ ಕಂಬಗಳನ್ನು ನಿರ್ಮಾಣ ಮಾಡಬೇಕು. ಈ ಕುರಿತು ವಿವಿಧ ಕಂಪನಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಸಿಎಂ ಸಭೆ ನಡೆಸಿ ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಈ ವೇಳೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮಲೆನಾಡು ಭಾಗದಲ್ಲಿ ತಲೆದೋರಿರುವ ನೆಟ್ ವರ್ಕ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.
Advertisement
Advertisement
ಮಲೆನಾಡಿನ ಹೆಚ್ಚಿನ ಭಾಗದಲ್ಲಿ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಮಾತ್ರ ಇದೆ. ಇದರಿಂದ ನೆಟ್‍ವರ್ಕ್ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳು ಸಹ ಮಲೆನಾಡು ಭಾಗದಲ್ಲಿ ಟವರ್ ಹೆಚ್ಚಿಸಲು ಜೊತೆಗೂಡಬೇಕು. ಇದರಿಂದ ರಜೆ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಬರುವ ಯುವಕರಿಗೆ ಸಹಾಯವಾಗಲಿದೆ ಎಂದು ತಿಳಿಸಿದರು. ತಕ್ಷಣವೇ ಸಿಎಂ ಪ್ರತಿಕ್ರಿಯಿಸಿ, ಮಲೆನಾಡು ಭಾಗದಲ್ಲಿ ಯಾವುದೇ ರೀತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ತಲೆದೂರದಂತೆ ಟವರ್ ಗಳನ್ನು ಅಳವಡಿಸಬೇಕು. ಇದಕ್ಕೆ ಬೇಕಾದ ನೆರವನ್ನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹಾಜರಿದ್ದ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಭರವಸೆ ನೀಡಿದರು.
Advertisement
ತುಮಕೂರು ಶಿವಮೊಗ್ಗ ಹೆದ್ದಾರಿ ಯೋಜನೆಗೆ ತೊಡಕಾಗಿರುವ ತುಮಕೂರು ಪಟ್ಟಣದ ಭೂ ಸ್ವಾಧೀನ ಪ್ರಕ್ರಿಯೆಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಯಿತು. ಹೆದ್ದಾರಿಯಲ್ಲಿ ಹಾದು ಹೋಗುವ ಜಾಗದಲ್ಲಿರುವ ಕೆರೆಗಳನ್ನು ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಹೈವೇ ನಿರ್ಮಾಣ ಕಾಮಗಾರಿಗಳುನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಇದೇ ವೇಳೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.
Advertisement
ಸಿಗಂಧೂರು ಸೇತುವೆ ನಿರ್ಮಾಣದ ಕುರಿತು ಸಹ ಚರ್ಚಿಸಿದ್ದು, ಒಟ್ಟು 2.4 ಕಿ.ಮೀ. ಉದ್ದ ಇದ್ದು ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆದಷ್ಟು ಬೇಗ ಕೆಲಸ ಆರಂಭ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು. ಶಿವಮೊಗ್ಗ ಸುತ್ತ 2 ಲೈನ್ ರಿಂಗ್ ರಸ್ತೆಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೇ ಭೂಸ್ವಾದೀನಕ್ಕೆ ಇದ್ದ ಸಮಸ್ಯೆ ಬಗೆಹರಿಸಲಾಯಿತು. ಆದಷ್ಟು ಬೇಗ ರಿಂಗ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.