ಚೆನ್ನೈ: ತಮಿಳುನಾಡಿನಲ್ಲಿ ಮುಂಬರುವ 20 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಕ್ಕಳ್ ನಿದಿ ಮೈಯಂ (ಎಂಎನ್‍ಎಂ) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆಂದು ಎಂಎನ್‍ಎಂ ಮುಖ್ಯಸ್ಥ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ.
ರಾಜಧಾನಿಯ ಪಕ್ಷದ ಕಚೇರಿಯಲ್ಲಿ ತಮ್ಮ 64ನೇ ಹುಟ್ಟುಹಬ್ಬವನ್ನು ಕಾರ್ಯಕರ್ತರೊಂದಿಗೆ ಕಮಲ್ ಹಾಸನ್ ಆಚರಿಸಿಕೊಂಡರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಮುಂಬರುವ 20 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧೆಗೆ ಸಿದ್ಧವಾಗಿದ್ದು, ಈಗಾಗಲೇ ಎಲ್ಲಾ 20 ಕ್ಷೇತ್ರಗಳಲ್ಲಿ ಶೇ.80 ರಷ್ಟು ಪದಾಧಿಕಾರಿಗಳ ನೇಮಕ ಆಗಿದೆ ಎಂದು ಹೇಳಿದರು.
Advertisement
Advertisement
ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾದರೆ ಆಡಳಿತ ಪಾರದರ್ಶಕವಾಗಿರುತ್ತದೆ. ಈ ಬಗ್ಗೆ ಎಲ್ಲಾ ಪಕ್ಷಗಳು ಸಹ ಚಿಂತನೆ ನಡೆಸಬೇಕು. ನಮ್ಮ ಎಂಎನ್‍ಎಂ ಪಕ್ಷ ಸಂಪೂರ್ಣವಾಗಿ ಸದ್ಯದ ರಾಜಕಾರಣದ ಪದ್ಧತಿಯಲ್ಲಿ ಬದಲಾವಣೆ ತರಲಿದೆ. ನಮ್ಮದು ಸಂಪೂರ್ಣ ಜನರ ಪಕ್ಷವಾಗಿದೆ. ಹೀಗಾಗಿ ಜನರ ತೀರ್ಮಾನದಂತೆ ರಾಜಕೀಯದಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
Advertisement
ನಾವು ಮಾಡುವ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಜನ ದುಡ್ಡು ತೆಗೆದುಕೊಂಡು ಮತ ಹಾಕುವುದನ್ನೇ ನಿಲ್ಲಿಸುತ್ತಾರೆ. ಮುಂಬರುವ ಚುನಾವಣೆಗಳಲ್ಲಿ ಜನ ಸರಿಯಾದ ಆಯ್ಕೆ ಮಾಡುತ್ತಾರೆ. ಈಗಾಗಲೇ ಉಪ ಚುನಾವಣೆಯ ಬಗ್ಗೆ ಚರ್ಚೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಧರ್ಮಪುರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂದರು.
Advertisement
ಉಪಚುನಾವಣೆ ಏಕೆ?
ತಮಿಳುನಾಡು ವಿಧಾನಸಭಾ ಸ್ಪೀಕರ್ ಪಿ. ಧನ್‍ಪಾಲ್ ಆಡಳಿತರೂಢ ಎಐಎಡಿಎಂಕೆ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಟಿಟಿವಿ ದಿನಕರನ್ ಬಣದ 18 ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಿದ್ದರು. ಸ್ಪೀಕರ್ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಇದರ ಜೊತೆ ಇಬ್ಬರು ಶಾಸಕರ ಅಕಾಲಿಕ ಮರಣದಿಂದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಾಗಿದೆ. ಶೀಘ್ರವೇ ಚುನಾವಣಾ ಆಯೋಗ ಉಪ ಚುನಾವಣೆ ನಡೆಸಲಿದ್ದು, ಈಗಾಗಲೇ ಪೂರಕ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv