ಬೆಂಗಳೂರು/ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ(Vidhan Parishad Election) ಅಡ್ಡ ಮತದಾನ (Cross Vote) ಮಾಡಿದವರು ಯಾರು ಎನ್ನುವುದನ್ನು ಪತ್ತೆಹಚ್ಚಲು ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಇನ್ನೊಂದು ಕಡೆ ಕಾಂಗ್ರೆಸ್‌ನ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್(Dr. Anjali Nimbalkar) ಅವರು ಖಾನಾಪುರದ ಬಿಜೆಪಿ ಶಾಸಕ ಅಡ್ಡ ಮತದಾನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಐಸಿಸಿ ಜಂಟಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ(Vithal Halagekar) ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಶೇರ್ ಮಾಡಿರುವ ಡಾ. ಅಂಜಲಿ ನಿಂಬಾಳ್ಕರ್, ತೆರೆಮರೆಯ ರಾಜಕೀಯ ಪಿತೂರಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ನನಗೆ ಅತೀವ ಸಂತೋಷ ತಂದಿದೆ. ಇದೇ ವೇಳೆ ವಿರೋಧ ಪಕ್ಷದಲ್ಲಾಗಿರುವ ಅಡ್ಡಮತದಾನವು ಬಿಜೆಪಿ ಒಳಗಿರುವ ತೀವ್ರ ವಿಭಜನೆ ಮತ್ತು ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ ಎಂದು ಅಂಜಲಿ ನಿಂಬಾಳ್ಕರ್ ಆರಂಭದಲ್ಲಿ ಉಲ್ಲೇಖಿಸಿದ್ದಾರೆ.

ನೇರವಾಗಿ ಖಾನಾಪುರ ಶಾಸಕರನ್ನು ಗುರಿಯಾಗಿಸಿಕೊಂಡಿರುವ ಅವರು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ವಿಠ್ಠಲ ಹಲಗೇಕರ ಅವರು ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಂದು ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಇವರೇ ಪ್ರಮುಖ ಕಾರಣವಾಗಿದ್ದರು. ಅಂದರೆ ಅಂದು ಸಹ ಕಾಂಗ್ರೆಸ್ ನಾಯಕರು ಇವರ ಜೊತೆ ಕೈಜೋಡಿಸಿದ್ದರು ಎಂದರ್ಥವೇ? ಈಗ ಆ ದೊಡ್ಡ ಪಿತೂರಿ ಸಂಪೂರ್ಣವಾಗಿ ಬಯಲಾಗಿದೆ ಎಂದು ಗಂಭೀರ ಒಳ ಒಪ್ಪಂದದ ಕಡೆಗೆ ಬೆರಳು ಮಾಡಿದ್ದಾರೆ.
ತಮ್ಮ ರಾಜಕೀಯ ಹಿನ್ನಡೆಗೆ ಸ್ವಪಕ್ಷದ ನಾಯಕರೇ ಕಾರಣ ಎಂದು ಪರೋಕ್ಷವಾಗಿ ಕಿಡಿಕಾರಿರುವ ಅಂಜಲಿ, ಕೆಲವು ನಾಯಕರ ವೈಯಕ್ತಿಕ ಲಾಭಕ್ಕಾಗಿ ಅಂದು ನನ್ನನ್ನು ಬಲಿಪಶು ಮಾಡಲಾಯಿತು. ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವ ಆಸೆಗೆ ಬಿದ್ದು ಸ್ವಂತ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಈ ನಾಯಕರಿಗೆ ಪಕ್ಷದ ಸಿದ್ಧಾಂತದ ಅರಿವಾದರೂ ಇದೆಯೇ? ಇಂತಹ ಹಲವು ಗಂಭೀರ ಪ್ರಶ್ನೆಗಳಿಗೆ ಆ ನಾಯಕರು ಉತ್ತರಿಸಬೇಕಿದೆ ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಪರಿಷತ್ ಚುನಾವಣೆ ಮುಗಿದರೂ ಬೆಳಗಾವಿ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಮತ ಮತ್ತು ನಾಯಕರ ನಡುವಿನ ಶೀತಲ ಸಮರ ಈ ಪೋಸ್ಟ್ ಮೂಲಕ ಮತ್ತೊಮ್ಮೆ ಬೀದಿಗೆ ಬಂದಂತಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
2023ರ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ವಿಠ್ಠಲ ಹಲಗೇಕರ ಅವರು 54,629 ಮತಗಳ ಅಂತರದಿಂದ ಜಯಗಳಿಸಿದ್ದರು. ವಿಠ್ಠಲ ಹಲಗೇಕರ ಅವರಿಗೆ 91,834 ಮತಗಳು ಬಿದ್ದರೆ, ಅಂಜಲಿ ನಿಂಬಾಳ್ಕರ್ ಅವರಿಗೆ 37,2025 ಮತಗಳು ಬಿದ್ದಿದ್ದವು.
2018ರ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ ಅವರು 5,133 ಮತಗಳಿಂದ ವಿಠ್ಠಲ ಹಲಗೇಕರ ವಿರುದ್ಧ ಜಯಗಳಿಸಿದ್ದರು. ಅಂಜಲಿ ನಿಂಬಾಳ್ಕರ್ ಅವರಿಗೆ 36,649 ಮತಗಳು ಬಿದ್ದಿದ್ದರೆ ವಿಠ್ಠಲ ಹಲಗೇಕರ ಅವರಿಗೆ 31,516 ಮತಗಳು ಬಿದ್ದಿತ್ತು.
