Bengaluru CityDistrictsKarnatakaLatestLeading NewsMain Post

ಪೆನ್ನು ಹಿಡಿಯುವ ಕೈಗಳಿಗೆ ಗನ್ ಕೊಡುವುದು ಎಷ್ಟರ ಮಟ್ಟಿಗೆ ಸರಿ?: ಜಮೀರ್ ಕಿಡಿ

ಬೆಂಗಳೂರು: ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು. ಪೆನ್ನು ಹಿಡಿಯಬೇಕಾದ ಯುವಕರ ಕೈಗೆ ಗನ್ ಕೊಟ್ಟು ತರಬೇತಿ ನೀಡುತ್ತಿರುವ ಬಜರಂಗದಳವನ್ನು ‘ನಾವೇನು ಎಕೆ-47 ತರಬೇತಿ ಅಥವಾ ಬಾಂಬ್ ಹಾಕುವುದನ್ನು ಹೇಳಿಕೊಡುತ್ತಿಲ್ಲ. ಏರ್ ಗನ್ ತರಬೇತಿ ನೀಡುತ್ತಿದ್ದೇವೆ ಅಷ್ಟೇ’ ಎಂದು ಸಮರ್ಥಿಸಿಕೊಂಡಿರುವ ಮಾಜಿ ಸಚಿವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಟಿ ರವಿಯವರಿಂದ ಇಂತಹ ಉಡಾಫೆ ಉತ್ತರವನ್ನು ನಿರೀಕ್ಷಿಸಿರಲಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಾರಪೇಟೆ ಶಹರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಏರ್ ಗನ್ ತರಬೇತಿಗಾಗಿ, ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಇದಕ್ಕೆ ಯಾವುದೇ ರೀತಿಯ ಅನುಮತಿ ಪಡೆಯಬೇಕಿಲ್ಲ ಎಂಬ ನಿರ್ಲಕ್ಷ್ಯದ ಉತ್ತರ ನೀಡಿ ಜಾಣಕುರುಡತನ ಪ್ರದರ್ಶಿಸಿರುವ ಕೊಡಗು ಜಿಲ್ಲೆಯ ಎಸ್ ಪಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು. ಪೆನ್ನು ಹಿಡಿಯುವ ಕೈಗಳಿಗೆ ಗನ್ ಕೊಟ್ಟು ತರಬೇತಿ ನೀಡುತ್ತಿರುವುದು ಸರ್ಕಾರದ ವಿಕೃತ ಮನಸ್ಥಿಗೆ ಸಾಕ್ಷಿ. ಒಂದು ವೇಳೆ ಅಲ್ಪಸಂಖ್ಯಾತರು ಅವರಂತೆಯೇ ವರ್ತಿಸಿ, ಅವರ ಹಾಗೇಯೇ ಮನಬಂದಂತೆ ಮಾತನಾಡಿದ್ದರೆ ಇಷ್ಟೊತ್ತಿಗಾಗಲೇ ಕೋಲಾಹಲ ಸೃಷ್ಟಿಸಿಬಿಡುತ್ತಿದ್ದರು. ಬಿಜೆಪಿಗೆ ಒಂದು ನ್ಯಾಯ, ಬೇರೆಯವರಿಗೊಂದು ನ್ಯಾಯವಾ ಎಂದು ಶಾಸಕ ಜಮೀರ್ ಕಿಡಿ ಕಾರಿದರು.

ಗಾಂಧೀಜೀ ಅವರು ರಾಮರಾಜ್ಯದ ಕನಸು ಕಂಡಿದ್ದರು. ಆದರೆ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು, ದ್ವೇಷ ಹರಡಿ ಗೂಂಡಾ ರಾಜ್ಯ ಸೃಷ್ಟಿಸಲು ಹೊರಟಿದೆ. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಅದನ್ನು ಬಿಟ್ಟು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡುವ ಅಗತ್ಯ & ಆತುರ ಏನಿತ್ತು? ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದ ಮಾತ್ರಕ್ಕೆ, ನೀವು ಏನು ಬೇಕಾದರೂ ಮಾಡಬಹುದು, ಯಾವ ರೀತಿಯಾದರೂ ಹೇಳಿಕೆ ನೀಡಬಹುದು ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಜಮೀರ್ ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button