ಚಿಕ್ಕಬಳ್ಳಾಪುರ: ಮಹಾನ್ ಸುಳ್ಳಿನ ಸರದಾರರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಎಂ.ವೀರಪ್ಪ ಮೊಯ್ಲಿ ಈ ಬಾರಿಯೂ ನಮ್ಮ ಕೆಲಸಗಳನ್ನ ಹೈಜಾಕ್ ಮಾಡಿಕೊಂಡಿದ್ದು, ಸುಳ್ಳುಗಳನ್ನೇ ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಮನೆ ದೇವರು ಅವರಿಗೆ ಕೈ ಕೊಡಲಿದ್ದಾರೆಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕೊತ್ತಕೋಟೆ ಗ್ರಾಮದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡು ಎಸ್.ಆರ್.ವಿಶ್ವನಾಥ್ ಮಾತನಾಡಿದರು. ನಮಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಆದರೂ ಕೆಲ ವೇಳೆ ಸಣ್ಣ ಪುಟ್ಟ ಸುಳ್ಳು ಹೇಳುತ್ತೇವೆ. ಆದರೆ ಯಲಹಂಕ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಮಾಡಿದ ಕೆಲಸಗಳನ್ನು ಸಂಸದ ವೀರಪ್ಪ ಮೊಯ್ಲಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಕಾಮಗಾರಿಗಳಿಗೂ ಅವರದ್ದೇ ಫೋಟೋ ಹಾಕಿಕೊಂಡಿದ್ದಾರೆ. ಇದನ್ನು ನಂಬಲು ಜನ ಏನು ಗುಗ್ಗು ಅಂದುಕೊಂಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.
ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿರುವ ಸಾಧನೆಗಳ ಪುಸ್ತಕವೇ ಅವರಿಗೆ ಮಾರಕವಾಗಲಿದೆ. ಸದಾ ಸುಳ್ಳನ್ನೇ ಹೇಳುತ್ತಿರುವ ಮೊಯ್ಲಿ ಇನ್ನು 10 ವರ್ಷವಾದರೂ ಎತ್ತಿನಹೊಳೆ ನೀರು ತರಲ್ಲ. ಅವರ ವಿರುದ್ಧ ಕ್ಷೇತ್ರದ ಜನ ಬಹಳಷ್ಟು ಬೇಸತ್ತು ಹೋಗಿದ್ದಾರೆ. ಸೀಟು ಹಂಚಿಕೆ ಬಗ್ಗೆ ದೋಸ್ತಿ ಪಕ್ಷಗಳು ಗುದ್ದಾಡುತ್ತಿರುವುದರಿಂದ ಮೊಯ್ಲಿ ಅವರಿಗೆ ಅವರಿಗೆ ಟಿಕೆಟ್ ಸಿಗುವುದೇ ಅನುಮಾನವಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಚುನಾವಣಾ ಉತ್ಸಾಹವೇ ಇಲ್ಲ. ಈ ಬಾರಿ ಬಿಜೆಪಿಗೆ ಒಳ್ಳೆಯ ವಾತಾವರಣವಿದ್ದು, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರು ಅವರು ಈ ಬಾರಿ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಭರವಸೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv