ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸಿ, ನನ್ನ ಸ್ಥಾನವನ್ನೇ ಬಿಟ್ಟುಕೊಡುತ್ತೇನೆ ಎಂದು ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಯಾರೂ ಮಿತ್ರರಲ್ಲ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರನ್ನು ಹೊರಗಿಡುವ ಯತ್ನ ನಡೆಯುತ್ತಿದೆ. ಹೀಗಾಗಿ ಒಂದು ವೇಳೆ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಅಲ್ಲದೆ ಅವರು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸುವುದಾದರೆ ನನ್ನ ಸ್ಥಾನವನ್ನೇ ಬಿಟ್ಟು ಕೊಡುತ್ತೇನೆ. ಅವರು ಚಿತ್ರದುರ್ಗದಿಂದಲೇ ಸ್ಪರ್ಧಿಸಲಿ ಎಂದರು.
ಪ್ರಧಾನಿ ಮೋದಿಯವರನ್ನು ಒದ್ದೋಡಿಸಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ನನಗೂ ಅಚ್ಚರಿ ಮೂಡಿಸಿದೆ. ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಂವಿಧಾನದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದ್ದನ್ನು ನೋಡಿದರೆ ಅವರ ನಡೆ ನುಡಿ ಈ ನಡುವೆ ಸ್ವಲ್ಪ ವ್ಯತ್ಯಾಸವಾದಂತೆ ಕಾಣುತ್ತದೆ ಎಂದು ತಿಳಿಸಿದರು.
ರಮೇಶ್ ಕುಮಾರ್ ಅವರು ಪ್ರಧಾನಿ ಮೋದಿಯವರಿಗೆ ಮತ ಹಾಕದೇ ಇರಬಹುದು. ಆದರೆ ದೇಶದ ಜನ ಮತ ಹಾಕಿ ಮೋದಿ ಅವರನ್ನು ಪ್ರಧಾನಿ ಯಾಗಿಸಿದ್ದಾರೆ. ಈ ನಡುವೆ ರಮೇಶ್ ಕುಮಾರ್ ಹೆಚ್ಚು ಕಮ್ಮಿ ಮಾತಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಅನ್ನಿಸುತ್ತದೆ. ಬಾಡಿಗೆಗೆ ಬಂದ ಜನರಂತೆ ಮಾತಾಡುವುದು ಅವರ ಘನತೆಗೆ ತಕ್ಕುದಲ್ಲ ಎಂದು ತಿಪ್ಪಾರೆಡ್ಡಿ ವಾಗ್ದಾಳಿ ನಡೆಸಿದರು.