ಬೆಂಗಳೂರು: ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಬೆಳ್ಳಂಬೆಳಗ್ಗೆ ಪೌರಕಾರ್ಮಿಕರಾಗಿ, ಉತ್ತಮ ಕೆಲಸದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನೂರಾರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶಾಸಕ ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆ 4.30ರ ವೇಳೆಗೆ ವಾಕಿಂಗ್ ತೆರಳಿದ್ದರು. ಆಗ ಕಾಮಾಕ್ಷಿಪಾಳ್ಯದ ಆಲದ ಪಾರ್ಕ್ ನ ಪಶ್ಚಿಮ ರಸ್ತೆಯಲ್ಲಿ ತಲೆ ಕೂದಲಿನ ರಾಶಿ ರಸ್ತೆ ತುಂಬಾ ಹರಡಿತ್ತು. ಇದು ವಾಕಿಂಗ್ ಬರುವವರಿಗೆ ಮುಜುಗುರ ಉಂಟು ಮಾಡುತ್ತದೆ ಅಂತ ಅರಿತ ಶಾಸಕರು, ಪಕ್ಷದ ಕಾರ್ಯಕರ್ತ ಉಮೇಶ್ ಜೊತೆಗೆ ಸೇರಿ ಸ್ವಚ್ಛಗೊಳಿಸಿದ್ದಾರೆ. ಪೊರಕೆಯಿಂದ ಗುಡಿಸಿ, ಬರಿ ಕೈಯಲ್ಲೇ ಕಸವನ್ನು ಎತ್ತಿ ಹಾಕಿದ್ದಾರೆ.
Advertisement
Advertisement
ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಹಾಗೂ ಮಾಹಿತಿ ನೀಡಿ ಪೋಸ್ಟ್ ಮಾಡಿದ್ದಾರೆ. ಸುರೇಶ್ ಕುಮಾರ್ ಅವರ ಕೆಲಸವನ್ನು ಮೆಚ್ಚಿ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ 7 ಗಂಟೆಯಲ್ಲಿ 1,700 ಜನರು ಲೈಕ್ ಮಾಡಿದ್ದು, 381 ಜನ ಕಮೆಂಟ್ ಹಾಗೂ 282 ಜನರು ಶೇರ್ ಮಾಡಿಕೊಂಡಿದ್ದಾರೆ.
Advertisement
ನಿಮ್ಮಂತಹ ಮಾದರಿ ಶಾಸಕರು ರಾಜ್ಯಕ್ಕೆ ಬೇಕು. ನೀವು ಸರಳ, ಸಜ್ಜನಿಕೆಯ ರಾಜಕಾರಣಿ. ನಿಮ್ಮ ಕೆಲಸದ ಮೂಲಕ ನಿಮ್ಮ ಬೆಂಬಲಿಗರನ್ನು, ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿರುವಿರಿ ಎಂದು ಅನೇಕ ನೆಟ್ಟಿಗರು ಅಭಿನಂದನೆ ಸಲ್ಲಿಸಿ ಗುಣಗಾನ ಮಾಡಿದ್ದಾರೆ.
Advertisement
ಪೋಸ್ಟ್ ನಲ್ಲಿ ಏನಿದೆ?:
ಇಂದು ಬೆಳಗಿನ ಜಾವವೇ ಸಮಾಧಾನ ಕೊಟ್ಟ ಕೆಲಸವಿದು. ಸುಮಾರು 4.30 ಗಂಟೆಗೆ ಬೆಳಗಿನ ನಡಿಗೆಯಲ್ಲಿ ತೊಡಗಿದ್ದಾಗ ಕಾಮಾಕ್ಷಿಪಾಳ್ಯದ ಆಲದ ಪಾರ್ಕ್ ನ ಪಶ್ಚಿಮ ರಸ್ತೆಯಲ್ಲಿ ತಲೆ ಕೂದಲಿನ ರಾಶಿ ರಸ್ತೆ ತುಂಬಾ ಹರಡಿತ್ತು. ಇದು ಹತ್ತಿರದ ಹೇರ್ ಡ್ರೆಸ್ಸಿಂಗ್ ಸಲೂನ್ ಕೃಪೆ ಮತ್ತು ಬೀದಿ ನಾಯಿಗಳ ಕೊಡುಗೆ. ಈ ಭಾಗದಲ್ಲಿ ಬಹಳ ಸಂಖ್ಯೆಯಲ್ಲಿ ನಾಗರಿಕರು ಬೆಳಗ್ಗೆ ವಾಕಿಂಗ್ ಬರುವುದರಿಂದ ಅವರಿಗೆ ಅಸಹ್ಯ ಉಂಟಾಗುವ ಸಂಭವ ಮನಗಂಡೆ. ತಕ್ಷಣ ಹತ್ತಿರವೇ ವಾಸವಿರುವ ನಮ್ಮ ಪಕ್ಷದ ಕಾರ್ಯಕರ್ತ ಉಮೇಶ್ ಅವರಿಗೆ ಫೋನ್ ಮಾಡಿ ಎರಡು ಪೊರಕೆ ತರುವಂತೆ ಮನವಿ ಮಾಡಿದೆ.
ಉಮೇಶ್ ಅವರು ಬಂದ ನಂತರ ಇಬ್ಬರೂ ಸೇರಿ ಅದನ್ನು ಗುಡಿಸಿ ಒಂದು ಚೀಲದಲ್ಲಿ ತುಂಬಿ ಅಲ್ಲಿಂದ ರವಾನೆ ಮಾಡಿದೆವು. ನಮ್ಮ ನಾಗರಿಕರಿಗೆ ಅಸಹ್ಯ ವಾತಾವರಣವಾಗದಂತೆ ಸ್ವಚ್ಛ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಆ ಕೂದಲ ರಾಶಿಯನ್ನೆಲ್ಲಾ ನಾವಿಬ್ಬರು ಬರಿ ಕೈಯಲ್ಲೇ ಎತ್ತಿ ತುಂಬುತ್ತಿದ್ದಾಗ ಅಲ್ಲಿ ಬಂದ ಒಂದಿಬ್ಬರು ಆಶ್ಚರ್ಯ ಮತ್ತು ಆಕ್ಷೇಪಣೆ ವ್ಯಕ್ತಪಡಿಸಿದರು. ಆದರೆ ವಿಧಿಯಿರಲಿಲ್ಲ. ಖುಷಿ ಕೊಟ್ಟ “ಸ್ವಚ್ಛತಾ ಕಾರ್ಯಕ್ರಮ” ವಿದು. ಈ ಕೆಲಸಕ್ಕೆ ಸಹಾಯ ಮಾಡಿದ ಉಮೇಶ್ ಅವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv