ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ ವೀರಪ್ಪ ಮೊಯ್ಲಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಶ್ರಮಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಪಕ್ಷದ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಬೆಂಬಲಿಗರ ನೇತೃತ್ವದಲ್ಲಿ ಚುನಾವಣಾ ಸಂಬಂಧ ಶಾಸಕ ಸುಧಾಕರ್ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವು ನಮಗೆ ಎಷ್ಟೇ ನೋವಾಗಿದ್ದರೂ, ಕೆಲ ನಾಯಕರಿಂದ ಅವಮಾನ ಆಗಿದ್ರೂ, ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇವೆ. ನಾನು ನನ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಎಂದೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಲ್ಲ ಎಂದು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.
ಸೋಮವಾರ ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸಲಿದ್ದು, ಅಂದೇ ಬಿಜೆಪಿ ಅಭ್ಯರ್ಥಿ ಸಹ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಕಾಂಗ್ರೆಸ್ ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಬರಬೇಕು ಎಂದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ವೀರಪ್ಪ ಮೊಯ್ಲಿ ಅವರೇ ನಮ್ಮ ಶಕ್ತಿ, ಮೊಯ್ಲಿ ಹೆಸರೇ ನಮ್ಮ ಗೆಲುವಿಗೆ ಶ್ರೀರಕ್ಷೆ, ವೀರಪ್ಪ ಮೊಯ್ಲಿ ಅಂದರೆ ಸಾಕು ನಾವ್ ಗೆದ್ದು ಬಿಡುತ್ತೇವೆ. ಅವರ ಹೆಸರೇ ನಮ್ಮನ್ನ ಗೆಲ್ಲಿಸಲಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ನಾನು 80 ಸಾವಿರ ಮತಗಳನ್ನ ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ 50 ಸಾವಿರ ಮತಗಳನ್ನ ಪಡೆದಿದ್ದರು. ಸ್ವತಂತ್ರ ಅಭ್ಯರ್ಥಿ ಸಹ 29 ಸಾವಿರ ವೋಟು ಪಡೆದಿದ್ದರು. ಈ ಎಲ್ಲಾ ಮತಗಳು ಈಗ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರಿಗೆ ಸಿಗಬೇಕು. ಚಿಕ್ಕಬಳ್ಳಾಪುರ ವಿಧಾನಸಬಾ ಕ್ಷೇತ್ರದಿಂದಲೇ 1.5 ಲಕ್ಷದ ಮತಗಳನ್ನ ನಾವು ಕೊಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅತಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.