-ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ
ಚಿಕ್ಕಬಳ್ಳಾಪುರ: ಕೆಲವೇ ದಿನಗಳಲ್ಲಿ ಸುಧಾಕರ್ ಮಂತ್ರಿಯಾಗುತ್ತಾರೆ ಎಂದು ಮಾನ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು. ಹೀಗಾಗಿ ಬಿಎಸ್‍ವೈ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಅದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಆರೂರು ಗ್ರಾಮದ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಉಪಚುನಾವಣೆಗೆ ಮುನ್ನವೂ ಸಿಎಂ ಬಿಎಸ್‍ವೈ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದರು. ಈಗ 525 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಚಿವ ಸಂಪುಟ ವಿಳಂಬಕ್ಕೆ ತಮ್ಮ ಬೆಂಬಲಿಗರು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಸಿಎಂ ಅವರು ನಮಗಾಗಿ 525 ಕೋಟಿ ರೂ. ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ದಿನಗಳು ಚೆನ್ನಾಗಿಲ್ಲ ಎಂದು ಇಷ್ಟು ದಿನ ಮಾಡಲಿಲ್ಲ, ಈಗ ಎಲ್ಲವೂ ಪರಿಪಕ್ವವಾಗಿದೆ. ನೂರಕ್ಕೆ ನೂರು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು ಆತ್ಮವಿಶ್ವಾಸದ ವ್ಯಕ್ತಪಡಿಸಿದರು.
ಹಿರಿಯ ಶಾಸಕರು, ಕಿರಿಯ ನೂತನ ಶಾಸಕರಿಗೆ ತಮ್ಮ ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಪಕ್ಷ ಹಾಗೂ ಹೈಕಮಾಂಡ್‍ಗೆ ನಾಯಕರು ಕೊಡುವ ಬೆಲೆಗೆ ಸಾಕ್ಷಿಯಾಗಿದೆ ಎಂದರು. ಪದವಿ ಮುಖ್ಯ ಅಲ್ಲ, ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯಾಗಲಿ ಎಂದು ಅಧಿಕಾರ ಮುಖ್ಯ ಅಲ್ಲ ಅಂತ ತ್ಯಾಗ ಮಾಡ್ತೀವಿ ಎಂದಿರುವುದು ಅವರ ಹೃದಯ ವೈಶಾಲ್ಯತೆಯ ಗುಣ ಎಂದರು.
ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂಬ ಮಾಹಿತಿ ಇದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಪದೇ ಪದೇ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುತ್ತಿದ್ದು, ಅವರಿಗೆ ಸಿಎಂ ಕುರ್ಚಿ ಮೇಲಿನ ಮೋಹಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.