ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಶಾಸಕ ಸುಧಾಕರ್ ಅವರ ಮನವೊಲಿಕೆ ಯತ್ನ ವಿಫಲವಾಗಿದೆ ಎಂಬ ಮಾಹಿತಿ ಲಭಿಸಿದೆ. ಸಚಿವ ಜಮೀರ್ ಅಹಮದ್ ಅವರೊಂದಿಗೆ ತೆರಳಿದ್ದ ಸಚಿವ ಎಂಟಿಬಿ ನಾಗರಾಜ್ ಮತ್ತೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ವಾಪಸ್ ಆಗಿದ್ದಾರೆ.
ನಿನ್ನೆ ತಡರಾತ್ರಿಯಿಂದ ಆರಂಭವಾಗಿದ್ದ ರೆಬೆಲ್ ಶಾಸಕರ ಸಂಧಾನ ಯತ್ನ ದಿನ ಪೂರ್ತಿ ವಿವಿಧ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಂಧಾನ ಸಭೆಯಲ್ಲಿ ಎಂಟಿಬಿ ನಾಗರಾಜ್ ಯಾವುದೇ ದೃಢ ನಿರ್ಧಾರಕ್ಕೆ ಬಂದಿರಲಿಲ್ಲ. ಅಲ್ಲದೇ ತಮ್ಮೊಂದಿಗೆ ರಾಜೀನಾಮೆ ನೀಡಿದ್ದ ಡಾ. ಸುಧಾಕರ್ ಅವರ ಮನವೊಲಿಕೆಗೆ ಎಂಟಿಬಿ ನಾಗರಾಜ್ ತೆರಳಿದ್ದರು. ಈ ವೇಳೆ ಅವರಿಗೆ ಜಮೀರ್ ಅಹಮದ್ ಸಾಥ್ ನೀಡಿದ್ದರು.
Advertisement
Advertisement
ಇಬ್ಬರು ಶಾಸಕರು ಒಂದೇ ಬಾರಿ ರಾಜೀನಾಮೆ ನೀಡಿದ್ದ ಕಾರಣ ಹಾಗೂ ತಮ್ಮ ತೀರ್ಮಾನಕ್ಕೆ ಡಾ. ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಲೇ ಬೇಕು ಎಂದು ಎಂಟಿಬಿ ನಾಗರಾಜ್ ಅವರು ಹೇಳಿದ್ದರು. ಸಿದ್ದರಾಮಯ್ಯ ಅವರ ನಿವಾಸಕ್ಕೆ ಚರ್ಚೆಗೆ ಆಗಮಿಸಲು ಸುಧಾಕರ್ ನಿರಾಕರಿಸಿದ್ದಾರೆ. ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಸುಧಾಕರ್ ಅವರ ಸಂಪರ್ಕ ಮಾಡಿದ ಸಂದರ್ಭದಲ್ಲಿ ಸ್ಪಷ್ಟ ಸಂದೇಶ ನೀಡಿರುವ ಅವರು, ಯಾವ ಕಾರಣಕ್ಕೂ ಸಂಧಾನಕ್ಕೆ ನಾನು ಬರಲ್ಲ ಹಾಗೂ ರಾಜೀನಾಮೆ ಹಿಂಪಡೆಯುವುದಿಲ್ಲ. ರಾಜೀನಾಮೆ ನೀಡಿದ್ದ ದಿನ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ. ನನ್ನ ದಾರಿಗೆ ನನಗೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
Advertisement
ಸುಧಾಕರ್ ಮನವೊಲಿಕೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಎಂಟಿಬಿ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇತ್ತ ಎಂಟಿಬಿ ನಾಗರಾಜ್ ಅವರಿಗೆ ಸ್ಪಷ್ಟ ಸಂದೇಶ ನೀಡಿರುವ ಸುಧಾಕರ್ ಅವರು ಬಳಿಕ ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆಯಿಂದಲೂ ಯಾರ ಸಂಪರ್ಕಕ್ಕೂ ಸಿಗದ ಸುಧಾಕರ್ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ನೇರ ಮುಂಬೈಗೆ ತೆರಳಿದ್ದಾರೆ. ಮೊದಲೇ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದ ಸುಧಾಕರ್ ಅವರ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿದ್ದು ಕೂಡ ಅವರ ಸ್ಪಷ್ಟ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ರಾಜೀನಾಮೆ ನೀಡುವುದಕ್ಕೂ ಮುನ್ನವೇ ಪಕ್ಷ ತೊರೆಯುವ ಬಗ್ಗೆ ಸುಧಾಕರ್ ಸಾಕಷ್ಟು ಚಿಂತನೆ ನಡೆಸಿದ್ದರು.
ಈಗಾಗಲೇ ಅಸಮಾಧಾನಿತ ಶಾಸಕರು ಮುಂಬೈನಲ್ಲಿ ಇರುವ ಕಾರಣ ಸುಧಾಕರ್ ಅವರನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇತ್ತ ಪ್ರತಿಬಾರಿಯೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಎಂಟಿಬಿ ನಾಗರಾಜ್ ಅವರು ಈಗ ಯಾವ ನಿರ್ಧಾರ ಮಾಡುತ್ತಾರೆ. ಸುಧಾಕರ್ ಅವರಂತೆ ರಾಜೀನಾಮ ಹಿಂಪಡೆಯದಿರುವ ನಿರ್ಧಾರ ಮಾಡುತ್ತಾರಾ ಅಥವಾ ವಾಪಸ್ ಪಡೆದು ಕಾಂಗ್ರೆಸ್‍ನೊಂದಿಗೆಯೇ ಇರುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಆದರೆ ಸಿದ್ದರಾಮಯ್ಯ ಮನೆಯಿಂದ ತೆರಳುವುದಕ್ಕೂ ಮುನ್ನ ಮಾತನಾಡಿದ್ದ ಸಚಿವ ಜಮೀರ್, ಸಂಧಾನ ಯಶಸ್ವಿಯಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಅವರಿಗೂ ಭಾರೀ ಹಿನ್ನಡೆಯಾಗಿದೆ.