ಕೊಪ್ಪಳ: ಶಾಸಕ ಶಿವರಾಜ ತಂಗಡಗಿ ಬೆಂಬಲಿಗರ ಅಟ್ಟಹಾಸ ಮುಂದುವರೆದಿದೆ. ತಾಲೂಕು ಪಂಚಾಯತಿ ಸದಸ್ಯೆ ಪತಿಯಾಗಿರುವ ಕಾಂಗ್ರೆಸ್ ಮುಖಂಡ ಜಡಿಯಪ್ಪ ಮುಕ್ಕುಂದಿ ಎಂಬವರು ಸಹಾಯಕ ಕೃಷಿ ಅಧಿಕಾರಿ ದೇವೇಂದ್ರಪ್ಪ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ನವಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಈ ಕುರಿತು ಹಲ್ಲೆಗೊಳಗಾದ ಕೃಷಿ ಅಧಿಕಾರಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೂ, ಎಫ್‍ಐಆರ್ ದಾಖಲಿಸಲು ಪೊಲೀಸರು ದಿನವಿಡೀ ಸರ್ಕಸ್ ಮಾಡಿದ್ದಾರೆ. ಕೊನೆಗೂ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.
ಕೃಷಿ ಹೊಂಡದ ಬಿಲ್ ನೀಡುವ ವಿಚಾರವಾಗಿ ನಿನ್ನೆ ಮುಖಂಡ ಜಡಿಯಪ್ಪ ಮತ್ತು ಕೃಷಿ ಅಧಿಕಾರಿ ದೇವೇಂದ್ರಪ್ಪ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಲ್ಲೆ ಮಾಡಲಾಗಿದ್ದು, ಜಡಿಯಪ್ಪ ಹಾಗೂ ಇತರರು ನನ್ನ ಮೇಲೆ ಚಪ್ಪಲಿ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿ ಇಲಾಖೆಯ ಸಿಮ್ ಇರುವ ಮೊಬೈಲ್ ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೇವೇಂದ್ರಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ಕೃಷಿ ಅಧಿಕಾರಿಯ ಹಲ್ಲು ಮುರಿದಿದೆ.
ಜಡಿಯಪ್ಪ ಮುಕ್ಕುಂದಿ ಪತ್ನಿ ಬಿಜೆಪಿಯಿಂದ ತಾಲೂಕು ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಜಡಿಯಪ್ಪ ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಶಾಸಕ ಶಿವರಾಜ ತಂಗಡಗಿಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು.