ಬೆಂಗಳೂರು: ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ ಎಂದು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗ ರೆಡ್ಡಿ, ನಾನು ಮೊದಲಿನಿಂದ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ನಾನು ಈಗ ಬಂದು ರಾಜೀನಾಮೆ ಕೊಡುತ್ತಿದ್ದೇನೆ. ಒಳಗಡೆ ಯಾರೆಲ್ಲ ಇದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಈಶ್ವರ ಖಂಡ್ರೆ ಅವರು, ನೀವೇ ಪಕ್ಷ ಕಟ್ಟಿ ಬೆಳೆಸಿದ್ದೀರಿ, ಪಕ್ಷ ಬಿಡುವುದು ಬೇಡ ಎಂದು ಹೇಳಿದರು. ಆದರೆ ನಾವು ಅವರಿಗೆ ಈ ಹಿಂದೆಯೇ ರಾಜೀನಾಮೆ ಕೊಡಲು ಕಾರಣ ಹೇಳಿದ್ದೇನೆ. ಪಕ್ಷ ಬಿಟ್ಟು ಹೋಗಲು ನಮಗೂ ತುಂಬಾ ದು:ಖವಾಗುತ್ತಿದೆ. ಆದರೆ ನನಗೆ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ಬೇಸರವಿಲ್ಲ. ಹೀಗಾಗಿ ಈ ಹಿಂದೆಯೇ ರಾಜೀನಾಮೆಯ ಬಗ್ಗೆ ಕಾರಣಗಳನ್ನು ಹೇಳಿದ್ದೇನೆ. ತಕ್ಷಣಕ್ಕೆ ಬೇರೆ ಪಕ್ಷಕ್ಕೆ ಸೇರುವ ಯೋಚನೆ ಮಾಡಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ವೇಳೆ ರಾಜೀನಾಮೆ ನೀಡಲು ಕಾರಣ ಏನು ಎನ್ನುವುದನ್ನು ಕೇಳಿದ್ದಕ್ಕೆ ಈ ಹಿಂದೆಯೇ ನಾನು ಹಲವಾರು ಸಂದರ್ಭದಲ್ಲಿ ಹೇಳಿದ್ದೇವೆ. ಅದೇ ವಿಡಿಯೋವನ್ನು ಪ್ರಸಾರ ಮಾಡಿ ಎಂದು ತಿಳಿಸಿದರು.
ಪುತ್ರಿ ಸೌಮ್ಯಾ ರೆಡ್ಡಿ ರಾಜೀನಾಮೆ ನೀಡುತ್ತಾರಾ ಎಂದು ಕೇಳಿದ್ದಕ್ಕೆ, ಈ ವಿಚಾರ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ನೋಡಿ ಎಂದು ತಿಳಿಸಿದರು.