ಬೆಳಗಾವಿ/ಚಿಕ್ಕೋಡಿ: ನಮ್ಮ ರಾಜಕೀಯ ನಾಯಕರು ತಾವು ಮಾಡುವ ರಾಜಕಾರಣಕ್ಕೆ 24*7 ಟೈಂ ಕೊಡುತ್ತಾರೆ. ಆದರೆ ಕುಡುಚಿ ಶಾಸಕ ರಾಜಕಾರಣ ಬದಿಗಿಟ್ಟು ಮಕ್ಕಳಿಗೆ ಪಾಠ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಕುಡಚಿ ಶಾಸಕ ಪಿ. ರಾಜೀವ್ ಮಕ್ಕಳಿಗೆ ಪಾಠ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಮನ್ನಿಕೇರಿ ತೋಟದ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜೀವ್ ಪಾಠ ಮಾಡಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳಿಗೆ ಜೀವಿಗಳ ಉಗಮ ಹಾಗೂ ನಾಗರೀಕತೆಯ ಬಗ್ಗೆ ಪಾಠ ಮಾಡಿದ್ದಾರೆ. ಈ ಹಿಂದೆಯೂ ಶಾಸಕ ಪಿ. ರಾಜೀವ್ ರಸ್ತೆ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರ ಜೊತೆ ಕಲ್ಲು ಒಡೆಯುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದರು. ನೇರವಾಗಿ ಜನರ ಜೊತೆ ಬೆರೆತು ಇಂತಹ ಕೆಲಸಗಳನ್ನು ಮಾಡುವುದರ ಮೂಲಕ ರಾಜೀವ್ ಜನಸ್ನೇಹಿ ಶಾಸಕ ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಅಲ್ಲದೆ ಶಾಸಕರು ಶಾಲೆಗೆ ತೆರಳಿ ಪಾಠ ಮಾಡಿದ್ದಕ್ಕೆ ಶಿಕ್ಷಣ ಪ್ರೇಮಿಗಳು ಶಾಸಕ ಪಿ. ರಾಜೀವ್ ಅವರನ್ನು ಶ್ಲಾಘಿಸಿದ್ದಾರೆ.