– ನಾರಾಯಣಗೌಡ ಹುಟ್ಟೂ ಗೂಂಡಾ!
– ಕಾಂಗ್ರೆಸ್ ಋಣದಲ್ಲಿದೆ ಜೆಡಿಎಸ್ ಸರ್ಕಾರ
ಮಂಡ್ಯ: ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯವರ ಬಳಿ ಈಗಾಗಲೇ ಹತ್ತು ಕೋಟಿ ಪಡೆದಿದ್ದು, ಮೇ 23ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯವರು ನಾರಾಯಣಗೌಡನನ್ನು ಎಲ್ಲಿಗೆ ಎತ್ತಿಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ಆಪರೇಷನ್ ಕಮಲದ ಬಗ್ಗೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಾಂಬ್ ಸಿಡಿಸಿದ್ದಾರೆ.
Advertisement
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಕೆ.ಬಿ.ಚಂದ್ರಶೇಖರ್, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಡೆಯುವ ಕೆಆರ್ ಪೇಟೆ ಪುರಸಭೆ ಚುನಾವಣೆಗೂ ಶಾಸಕ ನಾರಾಯಣಗೌಡ ಕ್ಷೇತ್ರದಲ್ಲಿ ಇರಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಈತನನ್ನು ಬಿಜೆಪಿಯವರು ಎಲ್ಲಿಗೆ ಎತ್ತಿಕೊಂಡು ಹೋಗುತ್ತಾರೆ ಗೊತ್ತಿಲ್ಲ. ನನ್ನ ಬಾಕಿ ಕೊಡಿ ಮುಂಬೈಗೆ ಹೋಗುತ್ತೇನೆ ಎಂದು ಹೇಳಿದ್ದಾರಂತೆ. ಈ ಬಗ್ಗೆ ಜೆಡಿಎಸ್‍ನವರಿಗೂ ಗೊತ್ತಿದೆ ಎಂದು ತಿಳಿಸಿದರು.
Advertisement
ನಾರಾಯಣಗೌಡ ಕ್ರಿಮಿನಲ್: ಬಿಜೆಪಿ ಆಪರೇಷನ್ ಕಮಲಕ್ಕೆ ಈ ಹಿಂದೆ ಭಂಗ ಆಗಿತ್ತು. ಆಗ ಹಣವನ್ನು ನಾರಾಯಣಗೌಡರಿಗೆ ನೀಡಲಾಗಿತ್ತು. ಮಾತುಕತೆಯಂತೆ ಉಳಿದ ಹಣ ಕೊಟ್ಟರೆ ಮುಂಬೈಗೆ ಹೋಗುವುದಾಗಿ ನಾರಾಯಣಗೌಡ ಹೇಳುತ್ತಿದ್ದಾರಂತೆ. ಈ ಬಗ್ಗೆ ಬಿಜೆಪಿಯ ನನ್ನ ಸ್ನೇಹಿತರು ನನಗೆ ಹೇಳಿದರು. ಕೆಆರ್ ಪೇಟೆ ಜನರ ಮಾನ, ಮರ್ಯಾದೆಯನ್ನೆಲ್ಲ ಈತ ಹರಾಜು ಹಾಕಿಬಿಟ್ಟ. ನಾರಾಯಣಗೌಡ ಹುಟ್ಟು ಗೂಂಡ. ಅವನ ಚರಿತ್ರೆ ತಿಳಿಯಬೇಕು ಅಂದರೆ ನೀವು ಬಾಂಬೆಗೆ ಹೋಗಬೇಕು. ಒಂದಾ, ಎರಡಾ, ನೂರಾರು ಕೆಟ್ಟ ಕೆಲಸ ಮಾಡಿದ್ದಾನೆ. ಯಾರದೋ ಜಮೀನನ್ನು 999 ವರ್ಷಗಳಿಗೆ ನಾರಾಯಣಗೌಡ ಭೋಗ್ಯಕ್ಕೆ ಹಾಕಿಸಿಕೊಂಡಿದ್ದಾನೆ. ಇದನ್ನ ನೋಡಿದ್ರೆ ಆತ ಯಾವ ಮಟ್ಟದ ಕ್ರಿಮಿನಲ್ ಎಂದು ಲೆಕ್ಕ ಹಾಕಿ. ಇಂಥವನಿಗೆ ನಾನು ಉತ್ತರ ಕೊಡಬೇಕಾ..? ಕೆಆರ್ ಪೇಟೆಯಲ್ಲಿ ಗೂಂಡಾ ಆಡಳಿತ ಕೊನೆಯಾಗಬೇಕು ಎಂದು ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದರು.
Advertisement
Advertisement
ಇದೇ ವೇಳೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ ಮುಖಂಡರು ನಿಖಿಲ್ ಪರ ಪ್ರಚಾರ ಮಾಡದೇ ಇರಲು ನೂರಕ್ಕೆ ನೂರು ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂದು ಚಂದ್ರಶೇಖರ್ ಆರೋಪಿಸಿದರು. ಅಭ್ಯರ್ಥಿ ನಿಖಿಲ್ ಮತ್ತು ಅವರ ತಂದೆ ಕುಮಾರಸ್ವಾಮಿ ನಮ್ಮನ್ನು ಭೇಟಿ ಮಾಡಿ ಬೆಂಬಲ ಕೇಳಿದ್ರೆ ನಾವೇ ನಿಖಿಲ್ ಗೆಲ್ಲಿಸಿಕೊಂಡು ಬರುತ್ತಿದ್ದೇವು. ಹಾಸನದಲ್ಲಿ ರೇವಣ್ಣ, ಪ್ರಜ್ವಲ್, ತುಮಕೂರಿನಲ್ಲಿ ದೇವೇಗೌಡರೇ ಸ್ವತಃ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಆದ್ರೆ ಅದು ಮಂಡ್ಯದಲ್ಲಿ ಆಗಲಿಲ್ಲ. ಹೀಗಾಗಿ ನಾವು ತಟಸ್ಥರಾಗಿದ್ದೇವು ಎಂದು ಮಾಜಿ ಶಾಸಕ ಚಂದ್ರಶೇಖರ್ ಹೇಳಿದ್ದಾರೆ.
ಸಿಎಂ ರೇಸ್: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ವಿಚಾರವನ್ನು ಪಕ್ಷದ ವಿಚಾರವಾಗಿದ್ದು, ಹಿರಿಯ ನಾಯಕರು ಚರ್ಚಿಸಿ ತೀರ್ಮಾನಿಸುತ್ತಾರೆ. ಚುನಾವಣೆ ಸಮಯದಲ್ಲಿ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ ಏಕೈಕ ಸಿಎಂ ಸಿದ್ದರಾಮಯ್ಯ. ಮುಂದೆ ಚುನಾವಣೆ ನಡೆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದರೆ ತಪ್ಪೇನಿಲ್ಲ. ಒಂದೇ ಒಂದು ಹಗರಣದಲ್ಲಿ ಸಿಲುಕದೇ ಐದು ವರ್ಷ ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮತ್ತು ಡಿಕೆ.ಶಿವಕುಮಾರ್ ಇದ್ದಾರೆ. ಅಂತಿಮವಾಗಿ ಪಕ್ಷದ ಅಧ್ಯಕ್ಷರು ರಾಹುಲ್ ಗಾಂಧಿ ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮೊದಲಿನಿಂದಲೂ ತಮಟೆ ಹೊಡೆದುಕೊಂಡು ಬರುತ್ತಿದ್ದಾರೆ. ಜೆಡಿಎಸ್ ನಾಯಕರ ಕೈಗೊಂಬೆಯಾಗಿ ವಿಶ್ವನಾಥ್ ಕೆಲಸ ಮಾಡುತ್ತಿದ್ದಾರೆ. ವಿಶ್ವನಾಥರ ಹೇಳಿಕೆಗಳಿಗೆ ಯಾರು ತಲೆ ಕೆಡಿಸಿಕೊಳ್ಳಲ್ಲ. ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಸರಿಯಾದದ್ದನ್ನು ಹೇಳಿದ್ದಾರೆ. ನಾವು ಎಂಬತ್ತು ಜನ ಇದ್ದವರು ಮೂವತ್ತು ಜನರಿಗೆ ಅಧಿಕಾರ ಕೊಟ್ಟಿದ್ದೇವೆ. ಜೆಡಿಎಸ್‍ನವರು ಕಾಂಗ್ರೆಸ್‍ನವರ ಋಣ ತೀರಿಸಬೇಕು. ಚುನಾವಣೆ ಸಂದರ್ಭದಲ್ಲಿ ಸಿಎಂ ನಮ್ಮನ್ನು ಪ್ರೀತಿ ಗೌರವದಿಂದ ಕಾಣಲಿಲ್ಲ. ಅಭ್ಯರ್ಥಿ ನಮ್ಮ ಬೆಂಬಲ ಕೇಳಲು ಬರುತ್ತಿದ್ದಾಗ ಶಾಸಕ ನಾರಾಯಣಗೌಡ ತಡೆದರು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿದ್ದೆ ಎಂದು ಸ್ಪಷ್ಟಪಡಿಸಿದರು.