– ನ್ಯಾಯಾಲಯಕ್ಕೆ ಹಾಜರಾಗದೇ ಮತ್ತೆ ಆನಂದ್ ಸಿಂಗ್ ಗೈರು
ಬೆಂಗಳೂರು: ನಾನು ಓರ್ವ ಜನ ಪ್ರತಿನಿಧಿ, ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿದ್ದವು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಶಾಸಕ ನಾಗೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ನಾಗೇಂದ್ರ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಂದು ಹಾಜರಾದರು. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಶಾಸಕರು, ಪ್ರತಿನಿತ್ಯ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ವಾರಕ್ಕೊಮ್ಮೆ ಹಾಜರಾಗಲು ಅನುಮತಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ಆರೋಪಿಗಳ ಮುಂದೆಯೇ ವಿಚಾರಣೆ ನಡೆಯಬೇಕು. ಆದ್ದರಿಂದ ನಿಮ್ಮ ಮನವಿಗೆ ಅವಕಾಶವಿಲ್ಲ ಅಂತ ನ್ಯಾಯಾಧೀಶರು ಹೇಳಿ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಿದರು.
ಇದೇ ವೇಳೆ ಇವತ್ತು ಸಹ ಗೈರಾಗಿದ್ದ ಆನಂದ್ ಸಿಂಗ್ ತಮ್ಮ ವಕೀಲರ ಮೂಲಕ ಸೋಮವಾರ ಹಾಜರಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೂ ಆನಂದ್ ಸಿಂಗ್ ವಿರುದ್ಧ ಜಾರಿಯಾಗಿರುವ ಜಾಮೀನು ರಹಿತ ವಾರಂಟ್ ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ.
ಏನಿದು ಪ್ರಕರಣ:
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಾಗಿತ್ತು. ಆದರೆ ಶಾಸಕರು ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಇದರಿಂದಾಗಿ ಹಲವು ಬಾರಿ ಸಮನ್ಸ್ ಅನ್ನು ಕೂಡ ಜಾರಿ ಮಾಡಲಾಗಿತ್ತು. ಆದರೂ ಶಾಸಕರು ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರು ವಾರಂಟ್ ಜಾರಿ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv