ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನು ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ ಎಂಬ ಬೇಸರ ನಮ್ಮಲ್ಲಿ ಮೂಡಿದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಯ ಕುರಿತು ಅಸಮಾಧಾನ ಇರೋದು ನಿಜ. ಹೈಕಮಾಂಡ್ ಇದೆ ಮಾತಾಡೋಣ ಅಂದಿದ್ದಾರೆ. ನನಗೆ ಅಸಮಾಧಾನ ಇದೆ. ಆದರೆ ಮುಂದೆ ಏನೆಲ್ಲಾ ಆಗುತ್ತೆ ಕಾದುನೋಡಿ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಸಚಿವ ಸ್ಥಾನದ ಕುರಿತು ಚರ್ಚೆ ನಡೆಸಲಾಗಿದೆ. ಈ ಕುರಿತು ಹೈಕಮಾಂಡ್ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಆದರೆ ಸಚಿವ ಸ್ಥಾನದ ಖಚಿತತೆ ಕುರಿತು ಯಾವುದೇ ಅಶ್ವಾಸನೆ ನೀಡಿಲ್ಲ. ಏನೆಲ್ಲಾ ಬೆಳವಣಿಗೆಗಳು ಆಗಲಿದೆ ಎಂದು ಕಾದು ನೋಡಬೇಕಿದೆ ಎಂದರು.
ಎಂಟಿಬಿ ನಾಗರಾಜ್ ಕಾಂಗ್ರೆಸ್ ಪಕ್ಷ ಬಿಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲಿದ್ದೇನೆ. ಪಕ್ಷ ಬಿಡುವ ಯಾವುದೇ ಯೋಚನೆಗಳು ಇಲ್ಲ. ಹೈಕಮಾಂಡ್ ಇದುವರೆಗೂ ಯಾರಿಗೂ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡುವುದಿಲ್ಲ. ಇದು ನಮ್ಮ ಪಕ್ಷದ ನಿಯಮ. ನಾನು ಚೆನ್ನೈಗೂ ಹೋಗುವುದಿಲ್ಲ, ಮುಂಬೈಗೂ ಹೋಗುವುದಿಲ್ಲ. ಬಿಜೆಪಿ ನಾಯಕರು ಯಾರು ನನ್ನನ್ನು ಸಂಪರ್ಕ ಮಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv