ಬೆಂಗಳೂರು/ಬೆಳಗಾವಿ: ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲ್ಲಾಡಿಸಿದ್ದ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಮತ್ತೊಂದು ಸುತ್ತಿನ ಕದನ ನಡೆಯುವ ಲಕ್ಷಣಗಳು ಕಾಣತೊಡಗಿವೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಮ್ಮೆ ಪಂಥಾಹ್ವಾನ ನೀಡಿದಂತೆ ಕಾಣುತ್ತಿದೆ.
ಹೌದು. ಗೋಕಾಕ್ ನಲ್ಲಿ ರಮೇಶ್ ಜಾರಕಿಹೋಳಿ ವಿರುದ್ಧ ಸಹೋದರ ಲಖನ್‍ರನ್ನ ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ರಾಜಕೀಯ ದಾಳ ಉರುಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಗೋಕಾಕ್ ನ ಬಿಜೆಪಿ ಮುಖಂಡ ಅಶೋಕ್ ಪೂಜಾರಿಯನ್ನ ಕಾಂಗ್ರೆಸ್ಸಿಗೆ ಕರೆ ತಂದು ಅಭ್ಯರ್ಥಿ ಆಗಿಸುವ ಪ್ರಯತ್ನದಲ್ಲಿದ್ದಾರೆ.
Advertisement
Advertisement
ಅಶೋಕ್ ಪೂಜಾರಿಯನ್ನ ಡಿ.ಕೆ ಶಿವಕುಮಾರ್ ಭೇಟಿಯಾಗುವಂತೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಸಹೋದರರಿಗೆ ಸವಾಲು ಹಾಕಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಗವಾಡದ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆಯನ್ನು ಕೂಡ ಡಿಕೆಶಿ ಭೇಟಿ ಮಾಡುವಂತೆ ನೋಡಿಕೊಂಡಿದ್ದಾರೆ. ಆ ಮೂಲಕ ಗೋಕಾಕ್ ನಲ್ಲಿ ಪರಸ್ಪರ ಒಬ್ಬರ ವಿರುದ್ಧ ಒಬ್ಬರು ತೊಡೆ ತಟ್ಟಿಕೊಂಡಿರುವ ಜಾರಕಿಹೊಳಿ ಸಹೋದರರಿಗೆ ಲಕ್ಷ್ಮಿ, ಅಶೋಕ್ ಪೂಜಾರಿ ಮೂಲಕ ಹೊಸ ಸವಾಲು ಹಾಕಿದ್ದಾರೆ.
Advertisement
Advertisement
ಇನ್ನೊಂದೆಡೆ ರಮೇಶ್ ಜಾರಕಿಹೋಳಿ ಜೊತೆ ಪಕ್ಷ ತೊರೆದ ಶ್ರೀಮಂತ ಪಾಟೀಲ್, ಕಾಗವಾಡದ ರಾಜುಕಾಗೆಯನ್ನ ಕಾಂಗ್ರೆಸ್ಸಿಗೆ ಕರೆತರುವ ಪ್ರಯತ್ನ ಮಾಡಿ ರಮೇಶ್ ಜಾರಕಿಹೋಳಿಗೆ ಮತ್ತಷ್ಟು ಮುಖಭಂಗ ಮಾಡಲು ಮುಂದಾಗಿದ್ದಾರೆ. ಲಕ್ಷ್ಮಿ ಪ್ರಯತ್ನದಂತೆ ಗೋಕಾಕ್ ನಲ್ಲಿ ಅಶೋಕ್ ಪೂಜಾರಿಗೆ ಕಾಂಗ್ರೆಸ್ ಟಿಕೆಟ್ ಅಂತೆಯೇ ಕಾಗವಾಡದಲ್ಲಿ ರಾಜು ಕಾಗೆಗೆ ಟಿಕೆಟ್ ಸಿಕ್ಕರೆ ಬೆಳಗಾವಿ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೈ ಮೇಲಾಗಲಿದೆ.
ಒಟ್ಟಿನಲ್ಲಿ ಈಗಾಗಲೇ ಸಹೋದರರಿಗೆ ಸವಾಲು ಹಾಕಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಪ್ರಯತ್ನ ಯಶಸ್ವಿಯಾಗುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.