ಬೆಂಗಳೂರು: ವರ್ಗಾವಣೆಗಾಗಿ ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಜೆಟಿ ಪಾಟೀಲ್ ಅವರ ಪಿಎ ಪ್ರಕಾಶ್ ಬೀಳಗಿ ವಿರುದ್ಧ ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆಎ ಹಿದಾಯತ್ತುಲ್ಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತಂತೆ ಅಗತ್ಯ ದಾಖಲೆಗಳು, ವಾಟ್ಸಪ್ ಸಂದೇಶಗಳನ್ನು ಹಿದಾಯತ್ ಅವರು ದೂರಿನೊಂದಿಗೆ ಲಗತ್ತಿಸಿದ್ದಾರೆ.
ಶಾಸಕ ಜೆಟಿ ಪಾಟೀಲ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಬೀಳಗಿ ಅವರು ವರ್ಗಾವಣೆ ದಂಧೆಯಲ್ಲಿ ತೊಡಗಿರಬಹುದು ಎಂದು ಹಿದಾಯತ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕಾಶ್ ಬೀಳಗಿ ಬೇರೆ ಬೇರೆ ಇಲಾಖೆಯ ಸಚಿವರ ಪತ್ರಗಳನ್ನು ನೀಡಿ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಶಾಸಕ ಜೆಟಿ ಪಾಟೀಲ್ ಅವರಿಗೆ ಸಂಬಂಧವೇ ಇಲ್ಲದ ಕೆಲಸಗಳನ್ನು ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದರು. ಅವರ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಬಗ್ಗದಿದ್ದಾಗ, ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಅರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಕೆಎ ಹಿದಾಯತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ವತಃ ಶಾಸಕರಿಗೆ ದಾರಿ ತಪ್ಪಿಸಿ ಸ್ಪೀಕರ್‌ಗೆ ನನ್ನ ವಿರುದ್ಧ ಪತ್ರ ಬರೆಸಿದ್ದರು ಎಂದು ಹಿದಾಯತ್ ಆರೋಪಿಸಿದ್ದಾರೆ. ಅವರ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಆದರೆ ಬೇರೆ ಬೇರೆ ಇಲಾಖೆಯ ಸಚಿವರ ಪತ್ರ ಹಿಡಿದು ವರ್ಗಾವಣೆಗೆ ಪ್ರಕಾಶ್ ಬೀಳಗಿ ಪಟ್ಟು ಹಿಡಿಯುತ್ತಿದ್ದರು. ಇದನ್ನೂ ಓದಿ: ಧಾರ್ಮಿಕ ಜಿಲ್ಲೆ ಉಡುಪಿಯಲ್ಲಿ ಮಹಿಷಾ ದಸರಾ ಯಾಕೆ?: ಶೋಭಾ ಕರಂದ್ಲಾಜೆ
ಚಿತ್ರದುರ್ಗದಲ್ಲಿ ಮೈಲಾರ ಲಿಂಗೇಶ್ವರ ಫಾರ್ಮಸಿ ಕಾಲೇಜಿಗೆ ಅನುಮತಿ ಕೇಳಿ ಪ್ರಕಾಶ್ ಬೀಳಗಿ ಪತ್ರ ಸಲ್ಲಿಸಿದ್ದಾರೆ. ಫಾರ್ಮಸಿ ಕಾಲೇಜಿಗೂ, ಶಾಸಕ ಜೆಟಿ ಪಾಟೀಲ್ ಅವರಿಗೆ ಸಂಬಂಧವೇ ಇಲ್ಲ. ಇದೇ ರೀತಿ ಶಾಸಕರಿಗೆ ಸಂಬಂಧವಿಲ್ಲದ ವರ್ಗಾವಣೆ ಕೋರಿಕಾ ಪತ್ರಗಳನ್ನು ನೀಡಿದ್ದಾರೆ. ಶಾಸಕರ ಪಿಎ ಎಂದು ಹೇಳಿಕೊಂಡು ವರ್ಗಾವಣೆ ದಂಧೆಯಲ್ಲಿ ಪ್ರಕಾಶ್ ಬೀಳಗಿ ಅವರು ತೊಡಗಿದಂತಿದೆ. ಈ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ನೀಡಿದ ವರ್ಗಾವಣೆ ಕೋರಿಕೆಗಳನ್ನು ಪರಿಶೀಲನೆಯಲ್ಲಿರಿಸಲಾಗಿದೆ.
ಆದರೆ ನಾನು ಕಚೇರಿಯಲ್ಲಿ ಇಲ್ಲದಿರುವಾಗ, ನಮ್ಮ ಕಚೇರಿಯ ಸಿಬ್ಬಂದಿಗೆ ಹೆದರಿಸಿ, ಬೆದರಿಕೆ ಹಾಕುವ ಯತ್ನ ನಡೆಸಿದ್ದಾರೆ. ಇದಲ್ಲದಕ್ಕೂ ಬಗ್ಗದಿರುವಾಗ ಅಪಪ್ರಚಾರದ ದಾರಿ ಹಿಡಿದಿದ್ದಾರೆ ಎಂದು ಆರೋಗ್ಯ ಇಲಾಖೆ ಆಪ್ತ ಕಾರ್ಯದರ್ಶಿ ಕೆಎ ಹಿದಾಯತ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪ ಮಾಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ CWRC ಸೂಚನೆ
Web Stories