ನನಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ರಿ – ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಗರಂ

Public TV
1 Min Read
Vishwanath

– ನಿಮಗೆ ಕೇವಲ ಸಿದ್ದರಾಮಯ್ಯ ಏಕೆ ಕಾಣ್ತಾರೆ?

ಮೈಸೂರು: ನನಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ರಿ. ನಿಮಗೆ ಕೇವಲ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಏಕೆ ಕಾಣುತ್ತಾರೆ ಎಂದು ಶಾಸಕ ಹೆಚ್.ವಿಶ್ವನಾಥ್ ಕಾಗಿನೆಲೆ ಶ್ರೀ ಮತ್ತು ಕುರುಬರ ಸಂಘದ ವಿರುದ್ಧ ಹರಿಹಾಯ್ದಿದ್ದಾರೆ.

ನನ್ನನ್ನು ಕಾಂಗ್ರೆಸ್‍ನಲ್ಲಿ ಮೂಲೆಗುಂಪು ಮಾಡಿದಾಗ ಕುರುಬ ಸಂಘಟನೆಗಳು ಮತ್ತು ಕನಕಪೀಠದ ಸ್ವಾಮೀಜಿಗಳು ಎಲ್ಲಿ ಹೋಗಿದ್ರು? ನಾನು ಕುರುಬ ಸಮುದಾಯದವನೇ ಅಲ್ವಾ? ಅಂದು ಏಕೆ ನೀವು ಮಾತನಾಡದೇ ಸುಮ್ಮನೇ ಕುಳಿತಿದ್ದೀರಿ. ಸಿದ್ದರಾಮಯ್ಯರನ್ನು ಪಕ್ಷಕ್ಕೆ ಕರೆ ತಂದ ನನ್ನನ್ನು ಮೂಲೆಗುಂಪು ಮಾಡಿದಾಗ ಏಕೆ ಪ್ರತಿಕ್ರಿಯೆ ನೀಡಿಲ್ಲ. ಸಿದ್ದರಾಮಯ್ಯರು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷ ಕರುಬರನ್ನು ಮಂತ್ರಿ ಮಾಡಲಿಲ್ಲ ಎಂದು ಸಾಲು ಸಾಲು ಪ್ರಶ್ನೆಗಳನ್ನು ವಿಶ್ವನಾಥ್ ಕೇಳಿದ್ದಾರೆ.

Vishwanath Sri

ಎಲ್ಲರ ವಿರೋಧದ ನಡುವೆ ಸಿದ್ದರಾಮಯ್ಯರನ್ನ ಕಾಂಗ್ರೆಸ್‍ಗೆ ಕರೆ ತಂದು ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳು ಆಗುವವರೆಗೂ ನಾನು ಅವರ ಬೆನ್ನಹಿಂದೆ ನಿಂತವನು. ಸಿದ್ದರಾಮಯ್ಯ ಹುಟ್ಟು ನಮ್ಮ ಸಮುದಾಯದ ಮಠ ಸೇರಿದಂತೆ ಎಲ್ಲ ಮಠಗಳ ವಿರೋಧಿ. ರಾಜ್ಯಾದ್ಯಂತ ನಿಮಗೆ ಮಠಗಳನ್ನು ಮಾಡಿಕೊಟ್ಟವರು ಯಾರು? ನಿಮ್ಮನ್ನು ಮಠಾಧೀಶರನ್ನಾಗಿ ಮಾಡಿದವರು ಯಾರು?. ಎಲ್ಲ ಸ್ವಾಮೀಜಿಗಳು ರಾಜಕೀಯ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ವಿಶ್ವನಾಥ್ ಮನವಿ ಮಾಡಿಕೊಂಡರು.

ಕಾಗಿನೆಲೆ ಶ್ರೀಗಳು ಹೇಳಿದ್ದೇನು?
ಟಗರು ಕಾಳಗದಲ್ಲಿ ಹೆಜ್ಜೆ ಹಿಂದಕ್ಕೆ ಇಟ್ಟಿದೆ ಎಂದರೆ ಅದು ಹೆದರಿ ಅಂತಾ ಅಲ್ಲ. ಮುಂದೆ ಹೆಜ್ಜೆ ಇಡಲು ಸಿದ್ಧವಾಗುತ್ತಿದೆ ಎಂದು ಸಿನಿಮೀಯ ಸ್ಟೈಲ್ ನಲ್ಲಿ ಸಿದ್ದರಾಮಯ್ಯರ ಪರ ಕಾಗಿನೆಲೆ ಶ್ರೀಗಳು ಬ್ಯಾಟ್ ಬೀಸಿದ್ದರು. ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಷ್ಟವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಶ್ರೀಗಳು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *