ತುಮಕೂರು: ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ರಾಸುಗಳ ವಿತರಣೆಗೆ ಅತೀ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿತ್ತು. ಆದರೆ ಈ ವರ್ಷ ಕೇವಲ 57 ಫಲಾನುಭವಿಗಳ ಆಯ್ಕೆಗೆ ಅವಕಾಶ ಕೊಟ್ಟಿದ್ದಾರೆ ಇದು ನೋವಿನ ಸಂಗತಿ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಊರ್ಡಿಗೆರೆ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Advertisement
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮಾಂತರದಲ್ಲಿ ಜಾನುವಾರುಗಳನ್ನು ವಿತರಿಸಲು 345 ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಸೌಲಭ್ಯ ವಿತರಿಸಲು ಕೇವಲ 47 ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆದೇಶ ಕಳುಹಿಸಿದ್ದಾರೆ. ಜಿಲ್ಲೆಗೆ ಬಹಳ ದೊಡ್ಡದಿರುವ ಕ್ಷೇತ್ರ ಹಾಗೂ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ರೈತ ಸಮುದಾಯದವರು ವಾಸಿಸುತ್ತಿರುವ ಕ್ಷೇತ್ರದಲ್ಲಿ ಕಡಿಮೆ ಫಲಾನುಭವಿಗಳನ್ನು ಆಯ್ಕೆ ಮಾಡಲು ತಾಕೀತು ಮಾಡಿರುವುದು ನೋವಿನ ಸಂಗತಿ ಎಂದರು.
Advertisement
ಕುಮಾರಸ್ವಾಮಿಯವರು ರಾಜ್ಯದ ರೈತರ ಕಷ್ಟಗಳನ್ನು ನೋಡಿ ಸಾಲ ಮನ್ನಾ ಯೋಜನೆ ಜಾರಿಗೆ ತಂದರು. ಇದರಿಂದ ರಾಜ್ಯದ ಹಲವಾರು ಬಡ ರೈತರು ಸುಸ್ತು ಬಡ್ಡಿ ಹಾಗೂ ಸಾಲದಿಂದ ಋಣಮುಕ್ತರಾದರು. ನಮ್ಮ ಗ್ರಾಮಾಂತರದಲ್ಲಿ 12,613 ರೈತರ ಸುಮಾರು 68 ಕೋಟಿ ರೂ.ಗಳ ಸಾಲ ಮನ್ನಾವಗಿದೆ. ನಿಜಕ್ಕೂ ಈ ಕ್ಷೇತ್ರದ ಜನ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
Advertisement
ತುಮಕೂರು ಗ್ರಾಮಾಂತರದ ಪ್ರತಿ ಹೋಬಳಿಯಲ್ಲೂ ರಾಸುಗಳ ಪ್ರದರ್ಶನ ಹಾಗೂ ಬರಡು ರಾಸುಗಳಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ತಪಾಸಣೆ ಹಮ್ಮಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಅಧಿಕಾರಿ ಡಾ.ಸಂಜೀವರಾಯ್ ಅವರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಕೋಳಿ ಸಾಕಾಣಿಕೆಯ 30 ಫಲಾನುಭವಿಗಳಿಗೆ ನಾಟಿ ಕೋಳಿ ಮರಿ ಮತ್ತು ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್‍ಗಳನ್ನು ವಿತರಿಸಲಾಯಿತು.