ತುಮಕೂರು: ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಇಂದು ಬೇಷರತ್ ಅಂದರೆ ಬೇ ಡ್ಯಾಷ್ ಷರತ್ತುಗಳ ಬೆಂಬಲ ಅಂತ ಬದಲಾಯಿಸಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಮುಖಂಡ ಸಿಟಿ ರವಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಹಳಸಿದವರು ಮತ್ತು ಹಸಿದವರ ಸರ್ಕಾರ. ಕಾಂಗ್ರೆಸ್ ನವರು ಹಳಸಿದವರು, ಜೆಡಿಎಸ್ ನವರು ಹಸಿದವರು. ಇವರಿಗೆ ಆಡಳಿತ ನಡೆಸಲು ಯಾವುದೇ ನೈತಿಕ, ಸೈದ್ಧಾಂತಿಕ ಬಲವಿಲ್ಲ. ಬೇಷರತ್ ಬೆಂಬಲ ಎಂದು ಹೇಳಿ, ಬೇಷರತ್ ಅಂದರೆ ಬೇ ಡ್ಯಾಷ್ ಷರತ್ತುಗಳ ಬೆಂಬಲ ಅಂತ ಬದಲಾಯಿಸಿದ್ದಾರಾ ಎಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಲೇವಡಿ ಮಾಡಿದರು.
Advertisement
Advertisement
Advertisement
ಸರ್ಕಾರ ರಚನೆಯಾಗಿ ಇಷ್ಟು ದಿನ ಕಳೆದರೂ ಇನ್ನೂ ಖಾತೆಗಳ ಕ್ಯಾತೆ ನಿಂತಿಲ್ಲ. ಮಂತ್ರಿ ಮಂಡಲ ರಚನೆಯಾದ ದಿನದ ರೋಧನ ಕಡಿಮೆಯಾಗಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೆ ಎನ್ನುವ ಗ್ಯಾರೆಂಟಿಯನ್ನು ಮುಖ್ಯಮಂತ್ರಿ ಸಹೋದರನೇ ಕೊಡಲು ತಯಾರಿಲ್ಲ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಅನ್ನುವ ನಿಟ್ಟಿನಲ್ಲಿ ಹಸಿದವರು ಊಟಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಸ್ಥಿತಿಯ ಸರ್ಕಾರವಿದೆ ಎಂದು ವ್ಯಂಗ್ಯವಾಡಿದರು.
Advertisement
ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ, ಮಾಜಿ ಸಿಎಂ ಮನಸ್ಸು ಮಾಡಿದರೆ ಎರಡೇ ದಿನಕ್ಕೆ ಈ ಸರ್ಕಾರ ನೆಗೆದು ಬಿದ್ದು ಹೋಗುತ್ತೆ ಅಂತ. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ ಅಂತ ನಾನು ಹೇಳಿಲ್ಲ, ಹೊಟ್ಟೆ ಒಳಗೆ ಇಷ್ಟೆಲ್ಲಾ ಕಿಚ್ಚು ಇಟ್ಟುಕೊಂಡಿರುವ ಕಾಂಗ್ರೆಸ್ ಶಾಸಕರಿದ್ದಾರೆ. ನನಗೆ ಕೊಟ್ಟ ಖಾತೆ ಸರಿಯಿಲ್ಲ ಅಂತ ಮುನಿಸಿಕೊಳ್ಳುವ ಜೆಡಿಎಸ್ ಶಾಸಕರಿದ್ದಾರೆ. ಹಾಗಾಗಿ ಹೆಚ್ಚು ದಿನ ಸರ್ಕಾರ ಇರುತ್ತೆ ಅಂತ ಯಾರಾದ್ರು ಹೇಳಿದರೆ ಅದು ಅವರಿಗೇ ನಂಬಿಕೆಯಿಲ್ಲದ ಮಾತಾಗುತ್ತೆ. ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಹೇಳಿದ್ದ ರೇವಣ್ಣ ಹೆಸರನ್ನು ಉಲ್ಲೇಖಿಸದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.