ಶಿವಮೊಗ್ಗ: ರಾಜ್ಯದಲ್ಲಿ ಒಂದೆಡೆ ಮಳೆಯಿಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಆದ್ರೆ ಸದನದಲ್ಲಿ ಇದ್ಯಾವುದೂ ಚರ್ಚೆಯಾಗುತ್ತಿಲ್ಲ. ಕೆಲಸಕ್ಕೆ ಬಾರದ ವಿಷಯಗಳೇ ಚರ್ಚೆಯಾಗುತ್ತಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದಿದೆ. ಈಗಲೂ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ಚರ್ಚೆ ಆಗ್ತಿದೆ. ರಾಜ್ಯದಲ್ಲಿ 21 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನಾನೂ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಆದ್ರೆ ಕಾಂಗ್ರೆಸ್ ಇನ್ನೂ ಹನಿಮೂನ್ ಪೀರಿಯಡ್‌ನಿಂದ ಹೊರಬಂದಿಲ್ಲ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ KSRTC ಚಾಲನಾ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ಪರಿಹಾರ ಚೆಕ್ ವಿತರಣೆ
ರಾಜ್ಯದಲ್ಲಿ ರೈತರು (Farmers) ಕಂಗಾಲಾಗಿದ್ದಾರೆ. ಮಲೆನಾಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ರಾಜ್ಯದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದೆ. ಕಲಬುರಗಿ ಭಾಗದಲ್ಲಿ ತೊಗರಿ, ಹೆಸರು ಕಾಳು ಬೆಳೆದ ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಆದ್ರೆ ಅಧಿವೇಶನದಲ್ಲಿ ಇದ್ಯಾವುದೂ ಚರ್ಚೆಯಾಗುತ್ತಿಲ್ಲ. ಕೆಲಸಕ್ಕೆ ಬಾರದ ವಿಷಯಗಳೇ ಚರ್ಚೆಗುತ್ತಿವೆ. ರಾಜ್ಯ ಸರ್ಕಾರ (Government Of Karnataka) ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆː ಮೊಬೈಲ್‌ನಲ್ಲೇ ಮಾಹಿತಿ ಪಡೆಯಬಹುದು – ಡಿಸಿಗಳೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವೀಡಿಯೋ ಸಂವಾದ
ರಾಜ್ಯ ಸರ್ಕಾರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ. ಈ ಹಿಂದಿನ ಸರ್ಕಾರದಲ್ಲಿ ಹಗರಣಗಳು ನಡೆದಿದೆ ಅನ್ನೋ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದರು, ಚುನಾವಣೆ ಮುಗಿದ ನಂತರವೂ ಅದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷ ಇದಕ್ಕೆಲ್ಲಾ ಹೆದರಿಕೊಳ್ಳೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಅಡಿಯಲ್ಲಿ ಜನಸೇವಾ ವಿದ್ಯಾಕೇಂದ್ರ ಕಳೆದ 30-40 ವರ್ಷಗಳಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದೆ. ಸಾವಿರಾರು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೀಗ ಶಿಕ್ಷಣದಲ್ಲಿ ವ್ಯಾಪಾರೀಕರಣದ ಚರ್ಚೆಯಾಗುತ್ತಿದೆ. ಶಿಕ್ಷಣ ಕ್ಷೇತ್ರದ ಮೇಲೂ ಈ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಇದು ಸಚಿವರಿಗೆ, ಸಿಎಂ ಅವರಿಗೆ ಶೋಭೆ ತರುವಂತಹದಲ್ಲ ಎಂದು ಕುಟುಕಿದ್ದಾರೆ.
ಗುಣಮಟ್ಟದ ಶಿಕ್ಷಣ ಕೊಡುವಂತಹ ಶಿಕ್ಷಣ ಕೇಂದ್ರಕ್ಕೆ ಕೊಟ್ಟ ಭೂಮಿಯನ್ನು ಹಿಂಪಡೆಯಬಾರದು. ಆದ್ರೆ ಕಾಂಗ್ರೆಸ್ ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಟ್ಟ ಭೂಮಿಯನ್ನು ಹಿಂಪಡೆದುಕೊಂಡಿದೆ. ಅದು ಅಕ್ರಮ ಎನ್ನುವುದಾದರೆ ಕಳೆದ 30 ವರ್ಷಗಳಲ್ಲಿ ಯಾವ್ಯಾವ ಸರ್ಕಾರ ಯರ‍್ಯಾರಿಗೆ ಭೂಮಿ ಕೊಟ್ಟಿದೆ, ಪರಭಾರೆ ಮಾಡಿದೆ ಎಲ್ಲದರ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ. 135 ಸೀಟು ಬಂದಿದೆ ಅಂತಾ ಆನೆ ನಡೆದಿದ್ದೇ ದಾರಿ ಎಂಬಂತೆ ಸಚಿವರು, ಶಾಸಕರು ವರ್ತಿಸುತ್ತಿದ್ದಾರೆ, ಅದು ನಮ್ಮ ದುರಾದೃಷ್ಟ. ಸದನದ ಒಳಗೇ ಇದಕ್ಕೆಲ್ಲಾ ಉತ್ತರ ಕೊಡ್ತೀವಿ ಎಂದು ಹೇಳಿದ್ದಾರೆ.
Web Stories