ಶಿವಮೊಗ್ಗ : ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಐವರು ವಿದ್ಯಾರ್ಥಿನಿಯರು ಅಡ್ಡಗಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ರಾತ್ರಿ ಸಮಯದಲ್ಲಿ ಐವರು ವಿದ್ಯಾರ್ಥಿನಿಯರು ತಮ್ಮ ಕಾರನ್ನು ಅಡ್ಡ ಹಾಕಿದ್ದಕ್ಕೆ ಅವಕ್ಕಾದ ಶಾಸಕರು ಕಾರು ನಿಲ್ಲಿಸಿ, ಏನಮ್ಮಾ ಕಾರು ಏಕೆ ಅಡ್ಡ ಹಾಕುತ್ತಿದ್ದೀರಿ ಏನು ನಿಮ್ಮ ಸಮಸ್ಯೆ ಎಂದು ಪ್ರಶ್ನಿಸಿದರು.ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ನಾವು ನಮ್ಮ ಶಾಲೆಗೆ ಈ ಹಿಂದೆ ಎರಡು ಬಾರಿ ಆಹ್ವಾನಿಸಿದ್ದೇವು. ಆದರೂ ನೀವು ಬಂದಿಲ್ಲ ನಮ್ಮ ಶಾಲೆಗೂ ಬನ್ನಿ ನಮ್ಮ ಶಾಲೆಗೂ ಏನಾದರೂ ಕೊಡುಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಆಗ ಶಾಸಕರು ಅಷ್ಟೇನಾ, ಇದಕ್ಕೆ ಕಾರು ಅಡ್ಡ ಹಾಕಿದ್ದ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಹೊಸನಗರ ತಾಲೊಕಿನ ನೂಲಿಗ್ಗೇರಿ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಶುಕ್ರವಾರ ರಾತ್ರಿ ಭಾಗವಹಿಸಿದ್ದರು. ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಿದ ಶಾಸಕರು ಮಕ್ಕಳಿಗೆ ಕೆಲವು ನೀತಿಪಾಠ ಹೇಳಿದ್ದರು. ಅಲ್ಲದೇ ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಒಂದು ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ಸಹ ನೀಡಿದರು.
Advertisement
Advertisement
ಶಾಸಕರ ಮಾತನ್ನು ಆಲಿಸಿದ್ದ ನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಪೃಥ್ವಿ, ಪ್ರಕೃತಿ, ರಂಜಿತಾ, ಕೀರ್ತಿ, ಪೂರ್ಣಿಮಾ ಶಾಸಕರು ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ಅಡ್ಡಗಟ್ಟಿದ್ದಾರೆ. ತಮ್ಮ ಶಾಲೆಗೆ ಆಹ್ವಾನಿಸಿ ಬೇಡಿಕೆ ಮುಂದಿಟ್ಟಿದ್ದಾರೆ.
ವಿದ್ಯಾರ್ಥಿನಿಯರ ಧೈರ್ಯ ಮತ್ತು ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಆರಗ ಜ್ಞಾನೇಂದ್ರ, ಮುಂದಿನ ದಿನದಲ್ಲಿ ನಿಮ್ಮ ಶಾಲೆಯ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದರು. ಅಲ್ಲದೇ ನಿಮ್ಮ ಶಾಲೆಗೆ ಬೇಕಾದ ಸೌಕರ್ಯದ ಬಗ್ಗೆ ಪಟ್ಟಿ ಮಾಡಿ ಸಲ್ಲಿಸಲು ಸೂಚಿಸಿದರು. ಈ ವಿದ್ಯಾರ್ಥಿನಿಯರ ಧೈರ್ಯ ಮತ್ತು ಕಾಳಜಿಗೆ ಸಾರ್ವಜನಿಕರು ಸಹ ಪ್ರಶಂಸಿದ್ದಾರೆ.