ಹಾಸನ: ಜಿಲ್ಲೆಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣ ಸಂಬಂಧ ತಡರಾತ್ರಿ ಎಫ್‍ಎಸ್‍ಎಲ್ (FSL) ತಂಡ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಪರಿಶೀಲನೆ ನಡೆಸಿದೆ.
ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಘಟನೆಗೂ ಉಗ್ರಗಾಮಿ ಹಾಗೂ ಉಗ್ರಗಾಮಿ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕವಾಗಿ ಟಾರ್ಗೆಟ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಉಗ್ರಗಾಮಿಗಳು ಬ್ಲಾಸ್ಟ್ ಗೆ ಬಳಸುವ ಯಾವ ವಸ್ತುವನ್ನೂ ಬಳಸಿಲ್ಲ. ಎಲೆಕ್ಟ್ರಾನಿಕ್ ಶಾರ್ಟ್ ಸರ್ಕ್ಯೂಟ್ (Short Circuit) ನಿಂದ ಇಷ್ಟು ಪ್ರಮಾಣದ ಬ್ಲಾಸ್ಟ್ ಆಗಲ್ಲ. ಸಣ್ಣಮಟ್ಟದ ಸ್ಫೋಟಕ ವಸ್ತು ಬಳಸಿದ್ದಾರೆ. ಇದು ವೈಯಕ್ತಿಕ ಕಾರಣದಿಂದ ನಡೆರುವ ಘಟನೆ ಎಂದರು.
ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಊಹಾಪೋಹಗಳನ್ನು ನಂಬಬಾರದು. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಕೊರಿಯರ್ ಪಡೆದು ವಾಪಸ್ ನೀಡಿದವರು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಸೆಲ್ ಡೀಟೆಲ್ಸ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಮೊದಲು ಎರಡು ಬಾರಿ ಅದೇ ವ್ಯಕ್ತಿಗೆ ಕೊರಿಯರ್ ಬಂದಿದೆ. ಆ ವ್ಯಕ್ತಿ ರಿಸೀವ್ ಮಾಡಿ ಬಿಸಾಡಿದ್ದಾರೆ. ಆ ವ್ಯಕ್ತಿ ಮೇಲೆ ದ್ವೇಷ ಇರುವವರು ಪಾರ್ಸೆಲ್ ಕಳುಹಿಸಿದ್ದಾರೆ ಎಂದು ಹೇಳಿದರು.
ನಿನ್ನೆ ತಡರಾತ್ರಿಯೇ ಮೈಸೂರು ಎಫ್‍ಎಸ್‍ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾ ಸ್ಥಳದಲ್ಲಿ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಈ ಸಂಬಂಧ ಸ್ಪೋಟಕ ವಸ್ತುಗಳ ಕಾಯ್ದೆ ಸೆಕ್ಷನ್ 3&4 ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಸ್ಫೋಟದಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗುವ ಯಾವುದೇ ಸುಳಿವು ಇರುವ ಮಾಹಿತಿ ಸದ್ಯಕ್ಕೆ ಇಲ್ಲಾ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್- ಅಂಗಡಿಯಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯ
ಇತ್ತ ಗಾಯಾಳು ಶಶಿಗೆ ನಿನ್ನೆ ರಾತ್ರಿ ಸರ್ಜರಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದ ಕುವೆಂಪುನಗರದ ಎರಡನೇ ಹಂತದ ಕೊರಿಯರ್ ಶಾಪ್‍ನಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿದೆ. ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಬ್ಲಾಸ್ಟ್ ಆದ ಬಳಿಕ ಸಿಕ್ಕ ಮಾಹಿತಿ ಆಧರಿಸಿ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸ್ಫೋಟಕ್ಕೆ ಸಂಬಂಧ ಹೊಂದಿದ್ದ ಅನುಮಾನದ ಮೇಲೆ ವಿಚಾರಣೆ ನಡೆಸಲಾಗಿದೆ ಎಂದು ಹಾಸನ ಎಸ್‍ಪಿ ಹರಿರಾಮ್ ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ 7-30ರ ಸುಮಾರಿಗೆ ಕೊರಿಯರ್ ಶಾಪ್‍ನಲ್ಲಿ ಬ್ಲಾಸ್ಟ್ ಸಂಭವಿಸಿತ್ತು. ಕೊರಿಯರ್ ಶಾಪ್‍ಗೆ ಪಾರ್ಸೆಲ್ ಮೂಲಕ ಬಂದಿದ್ದ ಮಿಕ್ಸಿಯನ್ನು ಕೊರಿಯರ್ ಅಂಗಡಿ ಮಾಲೀಕ ಡೆಲಿವರಿ ಮಾಡಿದ್ದರು. ಪಾರ್ಸೆಲ್ ಪಡೆದಿದ್ದವರು ನಿನ್ನೆ ಕೊರಿಯರ್ ವಾಪಸ್ ನೀಡಿದ್ದರು. ವಾಪಸ್ ಪಡೆಯುವ ವೇಳೆ ಪರಿಶೀಲನೆ ನಡೆಸಿದಾಗ ಸ್ಫೋಟ ಸಂಭವಿಸಿತ್ತು.
ಘಟನೆ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.