ಬಳ್ಳಾರಿ: ರೈತರ ಭೂಮಿಯನ್ನು ವಶಪಡಿಸಿಕೊಂಡ ಕೆಐಎಡಿಬಿ ಮಿತ್ತಲ್ ಕಂಪನಿಗೆ ಸ್ಟೀಲ್ ಕಾರ್ಖಾನೆ ಸ್ಪಾಪನೆಗಾಗಿ ನೀಡಿತ್ತು. ಆದ್ರೆ ಸ್ಟೀಲ್ ಕಾರ್ಖಾನೆಗೆ ಜಾಗ ಪಡೆದು ಮಿತ್ತಲ್ ಮತ್ತು ಬ್ರಾಹ್ಮಣಿ ಸ್ಟೀಲ್ ಕಂಪನಿ ಇದೀಗ ಸೋಲಾರ್ ಪ್ಲಾಂಟ್ ಸ್ಥಾಪಿಸಲು ಹೊರಟಿವೆ. ಉದ್ಯೋಗದ ಆಸೆ ತೋರಿಸಿ ಭೂಮಿ ಕಿತ್ಕೊಂಡ ಮಿತ್ತಲ್ ಕಂಪನಿ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುಡತಿನಿ, ಹರಗಿನಿಡೋಣಿ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಮತ್ತೆ ಹೋರಾಟಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಬಳ್ಳಾರಿ ತಾಲೂಕಿನ 4500 ಹೆಚ್ಚು ರೈತರಿಂದ ಹತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ವಶಪಡಿಸಿಕೊಂಡಿದ್ದ ಕೆಐಎಡಿಬಿ ಆ ಭೂಮಿಯನ್ನು ಮಿತ್ತಲ್ ಹಾಗೂ ಬ್ರಾಹ್ಮಿಣಿ ಕಂಪನಿಗಳಿಗೆ ಸ್ಟೀಲ್ ಕಾರ್ಖಾನೆ ಸ್ಥಾಪನೆ ಮಾಡಲು ಭೂಮಿ ನೀಡಿತ್ತು. ಅಲ್ಲದೇ ಭೂಮಿ ನೀಡಿದ ರೈತರಿಗೆ ಉದ್ಯೋಗದ ಭರವಸೆ ಸಹ ನೀಡಿತ್ತು. ಆದ್ರೆ ಈಗ ಮಿತ್ತಲ್ ಕಂಪನಿ ಸ್ಟೀಲ್ ಕಾರ್ಖಾನೆ ಬದಲಾಗಿ ಸೋಲಾರ ಕಾರ್ಖಾನೆ ಸ್ಥಾಪಿಸ್ತಿದೆ.
Advertisement
ರೈತರಿಂದ 10,500 ಎಕರೆ ಭೂಮಿ ಪಡೆದ ಮಿತ್ತಲ್ ಮತ್ತು ಬ್ರಾಹ್ಮಣಿ ಕಾರ್ಖಾನೆಗಳು ಸಾಕಷ್ಟು ರೈತರಿಗೆ ಸರಿಯಾಗಿ ಪರಿಹಾರವನ್ನೆ ನೀಡಿಲ್ಲ. ನೂರಾರು ರೈತರು ಇಂದಿಗೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಂದು ಭೂಮಿ ಪಡೆದ ಕಾರ್ಖಾನೆಗಳು ರೈತರ ಕುಟುಂಬಗಳಿಗೆ ಸ್ಟೀಲ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿತ್ತು, ಆದ್ರೆ ಸೋಲಾರ್ ಪ್ಲಾಂಟ್ ನಿರ್ಮಿಸೋದ್ರಿಂದ ಉದ್ಯೋಗವೇ ಸಿಗಲ್ಲ. ಹೀಗಾಗಿ ಸೋಮವಾರ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.