ಪರ್ತ್: ಇತ್ತೀಚೆಗೆ ನಡೆದ ಆ್ಯಶಸ್ ಟೆಸ್ಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ 5 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದ ಆಸೀಸ್ ಆಟಗಾರ ಮಿಚೆಲ್ ಮಾರ್ಷ್, ಸ್ವತಃ ಮಾಡಿದ ಎಡವಟ್ಟಿನಿಂದ ಆಸ್ಪತ್ರೆ ಸೇರಿದ್ದಾರೆ.
ಶೆಫಿಲ್ಡ್ ಶೀಲ್ಡ್ ಟೂರ್ನಿಯ ಭಾಗವಾಗಿ ವೆಸ್ಟರ್ನ್ ಆಸ್ಟೇಲಿಯಾ ತಂಡದ ನಾಯಕತ್ವ ವಹಿಸಿಕೊಂಡಿರುವ ಮಿಚೆಲ್ ಮಾರ್ಷ್, ಪರ್ತ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಎದುರಾಳಿ ತಂಡದ ವಿರುದ್ಧ ಅರ್ಧ ಶತಕ ಗಳಿಸಿ ಮಿಂಚಿದ್ದರು. ಆದರೆ ಪಂದ್ಯ ಅಂತಿಮವಾಗಿ ಡ್ರಾದಲ್ಲಿ ಅಂತ್ಯವಾಗಿತ್ತು.
Advertisement
ಪಂದ್ಯ ಡ್ರಾ ಆದ ಅಸಮಾಧಾನದಿಂದ ಆಟಗಾರರ ಕೊಠಡಿಗೆ ತೆರಳಿದ್ದ ಮಾರ್ಷ್ ತನ್ನ ಬಲಗೈಯಿಂದ ಗೋಡೆಗೆ ಪಂಚ್ ನೀಡಿದ್ದು, ಪರಿಣಾಮ ಅವರ ಕೈಗೆ ತೀವ್ರ ಪೆಟ್ಟಾಗಿತ್ತು. ನೋವಿನಿಂದ ಬಳಲುತ್ತಿದ್ದ ಮಾರ್ಷ್ ರನ್ನು ತಂಡದ ಮ್ಯಾನೇಜ್‍ಮೆಂಟ್ ಆಸ್ಪತ್ರೆಗೆ ದಾಖಲು ಮಾಡಿದೆ.
Advertisement
Advertisement
ಮಾರ್ಷ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಅವರ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣದಿಂದ ಸದ್ಯ ಅವರು ಟೂರ್ನಿಯ ಕೆಲ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ವಕ್ತಾರರು, ಮಾರ್ಷ್ ಮುಂದಿನ ಆಡುತ್ತಾರಾ ಎಂಬ ಬಗ್ಗೆ ವೈದ್ಯರ ಸಲಹೆಗೆ ಕಾದು ನೋಡುತ್ತಿದ್ದೇವೆ. ಅವರಿಗೆ ಆಗಿರುವ ಗಾಯದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಲು ಇನ್ನು ಕೆಲ ಸಮಯದ ಬೇಕಿದೆ ಎಂದಿದ್ದಾರೆ.
Advertisement
ಈಗಾಗಲೇ ಹಲವು ಬಾರಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಮಾರ್ಷ್ ಇತ್ತೀಚೆಗಷ್ಟೇ ಕಮ್ ಬ್ಯಾಕ್ ಮಾಡಿದ್ದರು. ಅಲ್ಲದೇ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಈ ನಡುವೆಯೇ ಸ್ವಂತ ತಪ್ಪಿನಿಂದ ತಂಡದಿಂದ ಹೊರಗುಳಿಯುವ ಸ್ಥಿತಿಗೆ ತಲುಪಿದ್ದಾರೆ.