– ವಿಶ್ವೇಶ್ವರಯ್ಯ ಬದಲಿಗೆ ವಿಶ್ವೇರಯ್ಯ ಎಂದು ಮುದ್ರಣ
ಚಿಕ್ಕಬಳ್ಳಾಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೋಟೋ ಇರುವ ಫ್ಲೆಕ್ಸ್ ನಲ್ಲಿ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ತಪ್ಪಾಗಿ ಮುದ್ರಿಸಿದ ಕುರಿತು ಜಿಲ್ಲಾ ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಅವರು ಇಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರಾಹುಲ್ ಅವರಿಗೆ ಶುಭ ಕೋರುವ ಸಲುವಾಗಿ ಕಾರ್ಯಕ್ರಮ ನಡೆಯಲಿರುವ ನಗರದ ಸರ್.ಎಂ.ವಿ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳನ್ನು ಬೆಳಗ್ಗೆಯೇ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ ಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರು ತಪ್ಪಾಗಿ ಮುದ್ರಣ ಮಾಡಲಾಗಿತ್ತು. ಆದರೆ ಇದನ್ನು ಗಮನಿಸದ ಜಿಲ್ಲಾ ನಾಯಕರು ಪ್ರಚಾರ ಫಲಕವನ್ನು ಅಳವಡಿಸಿದ್ದರು. ಇದನ್ನು ಕಂಡ ಸಾರ್ವಜನಿಕರು ರಾಜಕೀಯ ನಾಯಕರ ಬೇಜವಾಬ್ದಾರಿತನದ ವಿರುದ್ಧ ಟೀಕೆ ಮಾಡಿದ್ದಾರೆ.
Advertisement
Advertisement
ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಹುಟ್ಟೂರಾದ ಮುದ್ದೇನಹಳ್ಳಿಯಿಂದ ಕೇವಲ 5 ರಿಂದ 6 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲೇ ಅವರ ಹೆಸರು ತಪ್ಪಾಗಿ ಪ್ರಚಾರಗೊಳ್ಳುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಈ ಹಿಂದೆ ವಿಜಯಪುರ ಸಮಾವೇಶದಲ್ಲಿ ಬಸವಣ್ಣನವರ ವಚನ ಉಚ್ಛಾರಣೆವನ್ನು ತಪ್ಪಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದ್ದ ರಾಹುಲ್ ಗಾಂಧಿ ಬಳಿಕ ವಿಶ್ವೇಶ್ವರಯ್ಯ ಎನ್ನುವ ಬದಲು ‘ವಿಸ ಸವಿಸರ’ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.