ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

Public TV
3 Min Read
UDUPI FISHERMEN copy 1

 – ಕಾಣೆಯಾದ ಮೀನುಗಾರರ ಬಗ್ಗೆ ಸುಳಿವೇ ಇಲ್ಲ

ಉಡುಪಿ/ಕಾರವಾರ: ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದೆ.

ಡಿಸೆಂಬರ್ 13 ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಮಾಲೀಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್, ಜೋಗಯ್ಯ ಎಂಬವರು ಕಾಣೆಯಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಹಾಗೂ ಉಡುಪಿ ಜಿಲ್ಲೆಯ 2 ಮೀನುಗಾರರು ಸೇರಿದಂತೆ ಒಟ್ಟು ಏಳು ಜನ ಮೀನುಗಾರರು ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಕುಟುಂಬದವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

UDP MLA

ಮೀನುಗಾರರನ್ನು ಹುಡುಕಿ ಕೊಡುವಂತೆ ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದರು. ಬೋಟಿನ ಪತ್ತೆ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಡಿಐಜಿ ನೇತೃತ್ವದ ತನಿಖಾ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರೆ, ಕೇಂದ್ರ ಸರ್ಕಾರ ಸಟಲೈಟ್ ತಂತ್ರಜ್ಞಾನ, ನೌಕಾದಳದ ಸಿಬ್ಬಂದಿಯನ್ನು ಹಾಗೂ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸಿತ್ತು. ಆದರೆ ಅರಬ್ಬೀ ಸಮುದ್ರದಲ್ಲಿ ಅವಶೇಷಗಳಾಗಲಿ, ಶವವಾಗಲಿ ಸಿಗದ ಕಾರಣ ಉಗ್ರವಾದಿಗಳು ಅಥವಾ ಕಡಲಗಳ್ಳರು ಅಪಹರಿಸಿದ ಶಂಕೆ ವ್ಯಕ್ತಪಡಿಸಲಾಗಿತ್ತು. ಇದನ್ನೂ ಓದಿ: ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

ಕುಟುಂಬದೊಂದಿಗೆ ಶಾಸಕರಿಂದ ಪರಿಶೀಲನೆ:
ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಉಡುಪಿಯ ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

UDUPI

ಮೀನುಗಾರರು ನಾಪತ್ತೆಯಾದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಅವರು ಮಾತುಕತೆ ಸಹ ನಡೆಸಿದ್ದರು. ಇದಾದ ಬಳಿಕ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೇ ವೇಳೆ ಕೇಂದ್ರ ಸರಕಾರ ಮತ್ತಷ್ಟು ಪತ್ತೆ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡುವ ಜೊತೆ ಖುದ್ದು ಮೀನುಗಾರರನ್ನು ದೆಹಲಿಗೆ ಕರೆಸಿಕೊಂಡು ಹಲವು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

ಹುಡುಕಾಟ ಮಾಡಲು ಕುಟುಂಬಸ್ಥರ ಮನವಿಯ ಮೇರೆಗೆ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಭಾರತೀಯ ಭೂಸೇನೆಯ ಅಧಿಕಾರಿಗಳ ಜೊತೆಗೆ ಮತ್ತು ನಾಪತ್ತೆಯಾದ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆಗೆ ತೆರಳಿದ್ದರು.

ಊಹಾ ಪೋಹಗಳಿಗೆ ಎಡೆ:
ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

ಕಾಣೆಯಾದ ಒಂದೂವರೆ ತಿಂಗಳಲ್ಲಿ ಬೋಟಿನ ಮೀನು ತುಂಬುವ ಬಾಕ್ಸ್ ಸಿಕ್ಕಿದ್ದು ಯಾವುದೋ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು. ಇದರ ಅವಶೇಷಗಳು ಅಥವಾ ಮೀನುಗಾರರ ಶವವಾದರೂ ಸಿಗಬೇಕಿತ್ತು, ಅದೂ ಕೂಡ ದೊರೆಯದೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನೌಕಾದಳ ನಿರಂತರ ಐದು ತಿಂಗಳಿಂದ ಹುಡುಕಾಟ ನಡೆಸಿ ಮಹಾರಾಷ್ಟ್ರದ ಮಲ್ವಾನ್ ನ ಕಡಲತೀರದಿಂದ ಅರಬ್ಬೀ ಸಮುದ್ರದ 33 ಕಿಲೋಮೀಟರ್ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದ್ದು ಹೆಚ್ಚಿನ ಹುಡುಕಾಟ ನಡೆಸಿದೆ. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

ಇದೀಗ ಅಧಿಕೃತವಾಗಿ ಅವಶೇಷಗಳು ಸಿಕ್ಕಿರುವ ಕುರಿತು ನೌಕಾದಳದ ಅಧಿಕೃತ ಟ್ಟಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿರುವುದು ಸುವರ್ಣ ತ್ರಿಭುಜ ಹಡಗು ದುರಂತಕ್ಕೀಡಾಗಿದೆ ಎನ್ನುವುದನ್ನು ದೃಢಪಡಿಸಿದೆ. ಆದರೆ ಹಡಗು ಡಿಕ್ಕಿ ಸಂಭವಿಸಿ ದುರಂತಕ್ಕಿಡಾಗಿದೆಯೇ ಅಥವಾ ಸಮುದ್ರದ ಅಲೆಗೆ ಕೊಚ್ಚಿಹೋಯ್ತಾ ಎನ್ನುವುದು ನೌಕಾದಳದವರಿಂದ ಅಧಿಕೃತವಾಗಿ ತಿಳಿದುಬರಬೇಕಿದೆ.

suvarna

Share This Article
Leave a Comment

Leave a Reply

Your email address will not be published. Required fields are marked *