ಉಡುಪಿ: ಕಣ್ಮರೆಯಾಗಿದ್ದ ಬಾಲಕನೊಬ್ಬ ನದಿ ಬದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಹಲವು ಸಂಶಯಗಳನ್ನು ಮೂಡಿಸಿದೆ. ಈತನ ಜೊತೆಗೆ ಈಜಲು ಹೋದ ಸಂಬಂಧಿ ಯುವಕನ ಬಗ್ಗೆ ಮೃತ ಬಾಲಕನ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ. ಉಡುಪಿಯ (Udupi) ಪೆರ್ಡೂರು ಸಮೀಪ ಈ ಘಟನೆ ನಡೆದಿದೆ.
10ನೇ ತರಗತಿಯ ಹಿರಿಯಡ್ಕ ಪ್ರೌಢಶಾಲೆಯ ಶ್ರೀಶಾನ್ ಶೆಟ್ಟಿ ಮೃತ ವಿದ್ಯಾರ್ಥಿ. ನ.9 ರಂದು ಈತ ಅಜ್ಜಿಯ ಮನೆಯಿಂದ ಕಾಣೆಯಾಗಿದ್ದ. ನ.10 ಕ್ಕೆ ಈತನ ಶವ ಸಮೀಪದ ಮಡಿಸಾಲು ಹೊಳೆಯ ತೀರ ಪ್ರದೇಶದಲ್ಲಿ ಪತ್ತೆಯಾಗಿದೆ. ಈತನ ಜೊತೆಗಿದ್ದ ಯುವಕ ನವೀನ್ ಈ ಸಾವಿನ ವಿಚಾರವನ್ನು ಮುಚ್ಚಿಟ್ಟಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ಗೆ ಹಲ್ಲೆ ಮಾಡಿ ಪರಾರಿಗೆ ಯತ್ನ – ಕೊಲೆ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಹುಬ್ಬಳ್ಳಿ ಪೊಲೀಸರು
ಪೆರ್ಡೂರು ಪೇಟೆಗೆ ತಂದೆಯ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಶ್ರೀಶಾನ್, ಅಲ್ಲೇ ಸಮೀಪದ ಅಲಂಗಾರಿನಲ್ಲಿರುವ ಅಜ್ಜಿಯ ಮನೆಗೆ ಒಬ್ಬನೇ ಹೋಗಿದ್ದ. ಸಂಬಂಧಿ ಯುವಕ ನವೀನ್ ಎಂಬಾತನ ಒತ್ತಾಯದ ಮೇರೆಗೆ, ಮಡಿಸಾಲು ಹೊಳೆಯಲ್ಲಿ ಈಜಲು ಹೋಗಿದ್ದ. ತಂದೆ-ತಾಯಿ ಊರ ಹುಡುಗರ ನೆರವು ಪಡೆದು ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಪತ್ತೆಯಾಗದೆ ಹೋದಾಗ ಹಿರಿಯಡ್ಕ ಠಾಣೆಗೆ ದೂರು ಕೊಟ್ಟರು. ಮರುದಿನ ಈಜಲು ಹೋಗಿದ್ದ ನದಿ ತೀರದಲ್ಲೇ ಶ್ರೀಶಾನ್‌ನ ಶವ ಪತ್ತೆಯಾಗಿದೆ.
ಶ್ರೀಶಾನ್ ಈಜಲು ಹೋದ ನಂತರ ನಾನು ವಾಪಸು ಬಂದಿದ್ದೆ ಎಂದು ಸುಳ್ಳು ಹೇಳಿದ್ದ. ಶ್ರೀಶಾನ್ ತೆಗೆದುಕೊಂಡು ಹೋಗಿದ್ದ ದ್ವಿಚಕ್ರವಾಹನವನ್ನು ನದಿ ಬದಿಯ ನಿರ್ಜನ ಪ್ರದೇಶದಲ್ಲಿ ಅಡಗಿಸಿಟ್ಟು, ನಂತರ ಮರುದಿನ ತನ್ನ ಮನೆಯವರ ನೆರವಿನೊಂದಿಗೆ ಪ್ರತ್ಯೇಕ ಸ್ಥಳದಲ್ಲಿ ಹೂತು ಹಾಕಿದ್ದ. ಶವ ಪತ್ತೆಯಾಗುತ್ತಿದ್ದಂತೆ ನವೀನನ ಈ ಕರಾಮತ್ತು ಬಯಲಾಗಿತ್ತು. ಗಾಬರಿಯಿಂದ ನಾನು ಹೀಗೆ ಮಾಡಿದ್ದೆ ಎಂದು ಆತ ತಪ್ಪು ಒಪ್ಪಿಕೊಂಡಿದ್ದಾನೆ. ಇದೊಂದು ಕೊಲೆ ಪ್ರಕರಣ ಎಂದು ಮನೆಯವರಿಗೆ ಸಂಶಯವಿದೆ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯ ನಿರೀಕ್ಷೆಯಲ್ಲಿದ್ದಾರೆ.

