ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರು ಅವಕಾಶ ಸಿಕ್ಕಾಗಲೆಲ್ಲಾ ಮಹಿಳಾ ಕುಸ್ತಿಪಟುಗಳಿಗೆ (Wrestlers) ಲೈಂಗಿಕ ಕಿರುಕುಳ (Sexual Harassment) ನೀಡಲು ಪ್ರಯತ್ನಿಸಿದ್ದಾರೆ ಎಂದು ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹಲವು ಉನ್ನತ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶನಿವಾರ ಕೋರ್ಟ್‌ಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ. ಈ ವೇಳೆ ಬ್ರಿಜ್ ಭೂಷಣ್ ವಿರುದ್ಧ ಗಂಭೀರ ಆರೋಪ ಮಾಡಿರುವ ದೆಹಲಿ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳಿವೆ ಎಂದು ವಾದಿಸಿದ್ದಾರೆ.
ಮಹಿಳಾ ಕುಸ್ತಿಪಟುವೊಬ್ಬರ ದೂರನ್ನು ಉಲ್ಲೇಖಿಸಿ, ಹೇಳಿಕೆ ನೀಡಿದ ದೆಹಲಿ ಪೊಲೀಸರು, ತಜಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಪಿ ದೂರುದಾರರನ್ನು ಕೋಣೆಗೆ ಕರೆದು ಬಲವಂತವಾಗಿ ತಬ್ಬಿಕೊಂಡಿದ್ದಾರೆ. ದೂರುದಾರರು ಇದನ್ನು ವಿರೋಧಿಸಿದಾಗ ಬ್ರಿಜ್ ಭೂಷಣ್ ತಾನು ನಿಮ್ಮ ತಂದೆಯಂತೆ ಎಂದು ಹೇಳಿ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಅವರಿಗೆ ತಮ್ಮ ಕೃತ್ಯಗಳ ಬಗ್ಗೆ ಸಂಪೂರ್ಣ ಅರಿವಿತ್ತು ಎಂಬುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮತ್ತೊಂದು ದೂರನ್ನು ಉಲ್ಲೇಖಿಸಿ, ತಜಕಿಸ್ತಾನದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಸಂದರ್ಭದಲ್ಲಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅನುಮತಿಯಿಲ್ಲದೆ ತನ್ನ ಅಂಗಿಯನ್ನು ಮೇಲಕ್ಕೆತ್ತಿ, ಅನುಚಿತವಾಗಿ ತನ್ನ ಹೊಟ್ಟೆಯನ್ನು ಮುಟ್ಟಿದ್ದಾರೆ ಎಂದು ಮಹಿಳಾ ಕುಸ್ತಿಪಟು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣವನ್ನು ಉಲ್ಲೇಖಿಸಿ, ಆ ಪ್ರಕರಣದಲ್ಲಿ ಹಲವಾರು ಎಫ್‌ಐಆರ್‌ಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಆದರೆ ನ್ಯಾಯಾಲಯವು ಎಲ್ಲವನ್ನೂ ಒಂದೇ ಸ್ಥಳದಲ್ಲಿ ಆಲಿಸಿದೆ ಎಂದು ಹೇಳಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳ ತನಿಖೆಗಾಗಿ ಸರ್ಕಾರ ರಚಿಸಿದ್ದ ಮೇಲ್ವಿಚಾರಣಾ ಸಮಿತಿಯು ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ದೆಹಲಿ ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನೂ ಓದಿ: ಬಿಜೆಪಿ ಜೊತೆ ದೋಸ್ತಿ – ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟ
ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪ್ರತಿಭಟನೆಯ ನಂತರ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿದ ಆರೋಪಗಳನ್ನು ತನಿಖೆ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯವು ಭಾರತೀಯ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದ ಉಸ್ತುವಾರಿ ಸಮಿತಿಯನ್ನು ರಚಿಸಿತ್ತು. ಅದರ ವರದಿಯನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಆದರೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಪ್ರತಿಯನ್ನು ನೀಡಲಾಗಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. 6 ಬಾರಿ ಸಂಸದರಾಗಿದ್ದ ಅವರ ವಿರುದ್ಧ ಜೂನ್ 15 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರು. ಮುಂದಿನ ವಿಚಾರಣೆ ಅಕ್ಟೋಬರ್ 7 ರಂದು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರು ಬಂದ್‌ನಿಂದ ಸಮಸ್ಯೆ ಪರಿಹಾರ ಆಗಲ್ಲ, ಬಂದ್ ಕೈಬಿಡಿ: ಪರಮೇಶ್ವರ್ ಮನವಿ
Web Stories