ಬೆಂಗಳೂರು: ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಜೆಡಿಎಸ್ (JDS) ಅಧಿಕೃತವಾಗಿ ಸೇರ್ಪಡೆಯಾದ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ದೋಸ್ತಿಗೆ ಜೆಡಿಎಸ್ ಮುಸ್ಲಿಂ ನಾಯಕರು (Muslim Leaders) ವಿರೋಧ ವ್ಯಕ್ತಪಡಿಸಿದ್ದು ಪಕ್ಷ ತೊರೆಯಲು ಮುಂದಾಗಿದ್ದಾರೆ.
ಜೆಡಿಎಸ್ ಉಪಾಧ್ಯಕ್ಷ ಸೈಯ್ಯದ್ ಶಫೀವುಲ್ಲಾ ಸಾಹೇಬ್ ರಾಜೀನಾಮೆ ನೀಡಿದ್ದು ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಮತ್ತು ರಾಷ್ಟ್ರೀಯ ಅಧ್ಯಕ್ಷ ಹೆಚ್‌ಡಿ ದೇವೇಗೌಡರಿಗೆ (HD Devegowda) ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಸಿದ್ದಾಂತವನ್ನು ನಾವು ಒಪ್ಪುವುದಿಲ್ಲ. ಅಂತಹವರ ಜೊತೆ ಮೈತ್ರಿ ನಮಗೆ ಒಪ್ಪಿಗೆ ಇಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಇನ್ನು ಅನೇಕ ಮುಸ್ಲಿಂ ನಾಯಕರು ಪಕ್ಷ ಬಿಡಲು ನಿರ್ಧಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಫೀವುಲ್ಲಾ ಸಾಹೇಬ್, ಜೆಡಿಎಸ್ ಜಾತ್ಯಾತೀತ ನಿಲುವನ್ನು ಹೊಂದಿರುವ ಪಕ್ಷವಾಗಿದ್ದು, ಈಗ ಕೋಮುವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡರೆ ನಾವು ಪಕ್ಷದಲ್ಲಿಇರಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇದ್ದಾಗ ಹಲಾಲ್ ಕಟ್, ಹಿಜಾಬ್ ಹೀಗೆ ವಿಷಯದಲ್ಲಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿತ್ತು. ಇಂತಹವರ ಜೊತೆ ಸೇರಲು ನಾನು ಇಷ್ಟಪಡದ ಕಾರಣ ಇಬ್ರಾಹಿಂ, ದೇವೇಗೌಡರಿಗೆ ರಾಜೀನಾಮೆ ಕೊಟ್ಟಿದ್ದೇನೆ. ಇದು ನನ್ನ ನಿರ್ಧಾರವಾಗಿದ್ದು, ಉಳಿದ ನಾಯಕರು ಅವರ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಬಂದ್‌ನಿಂದ ಸಮಸ್ಯೆ ಪರಿಹಾರ ಆಗಲ್ಲ, ಬಂದ್ ಕೈಬಿಡಿ: ಪರಮೇಶ್ವರ್ ಮನವಿ
ಪಕ್ಷ ತೊರೆಯಲು ಜೆಡಿಎಸ್‌ನ ಹಲವು ಅಲ್ಪಸಂಖ್ಯಾತ ನಾಯಕರು ಮುಂದಾಗಿದ್ದು ಇಂದು ಮಧ್ಯಾಹ್ನ ಕೆಕೆ ಗೆಸ್ಟ್ ಹೌಸ್‌ನಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ ಬಳಿಕ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
Web Stories