ಬೆಂಗಳೂರು: ಈಜೀಪುರದಲ್ಲಿ ಕುಸಿದು ಬಿದ್ದಿದ್ದ ಕಟ್ಟಡದ ಅವಶೇಷಗಳಡಿಯಿಂದ 3 ವರ್ಷದ ಹೆಣ್ಣು ಮಗುವೊಂದು ಪವಾಡಸದೃಶವಾಗಿ ಬದುಕುಳಿದಿದೆ. 3 ವರ್ಷದ ಸಂಜನಾ ಸಾವನ್ನೇ ಗೆದ್ದು ಬಂದ ಮಗು.
ಮಗುವನ್ನು ಕಟ್ಟಡದ ಅವಶೇಷಗಳಡಿಯಿಂದ ಮಗುವನ್ನು ಹೊರಗೆ ತೆಗೆಯುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಶಿಳ್ಳೆ ಹಾಗೂ ಕರತಾಡನಗಳ ಮೂಲಕ ಶ್ಲಾಘಿಸಿದರು. ಇಂದು ಬೆಳಗ್ಗೆ ಕುಸಿದು ಬಿದ್ದ ಕಟ್ಟಡದ ತೆರವಿಗೆ ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅವಶೇಷಗಳಡಿಯಿಂದ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ತಕ್ಷಣ ಜೆಸಿಬಿ ಮೂಲಕ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ನಿಲ್ಲಿಸಿದ್ದಾರೆ. ಬಳಿಕ ತಾವೇ ಸ್ವತಃ ಒಂದೊಂದೇ ಕಲ್ಲು, ಇಟ್ಟಿಗೆಗಳನ್ನು ತೆಗೆಯುತ್ತಿದ್ದಾಗ ಸಂಜನಾ ಅಗ್ನಿಶಾಮಕ ಸಿಬ್ಬಂದಿ ಕೈಗೆ ಸಿಕ್ಕಿದ್ದಾಳೆ. ಮಗುವನ್ನು ಅಂಬುಲೆನ್ಸ್ ನಲ್ಲಿ ಸಮೀಪದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.
ಏನಾಗಿತ್ತು?: ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಗರ್ಭಿಣಿಯೊಬ್ಬರು ಇನ್ನೂ ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಹಾಗೂ ಕಲಾವತಿ ಹಾಗೂ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರಿಗೆ ಗಾಯವಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿಚಂದ್ರ ಹಾಗೂ ಕಲಾವತಿ ಎಂಬವರು ಮೇಲಿನ ಮನೆಯಲ್ಲಿದ್ದರು. ಕೆಳಗಿನ ಮನೆಯಲ್ಲಿದ್ದ ಎಂಟು ತಿಂಗಳ ಗರ್ಭಿಣಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಒಳಗೆ ಸಿಲುಕಿದ್ದರು. ಅಶ್ವಿನಿ ಅವರ ಗಂಡ ನೀರು ತರಲು ಹೊರಗೆ ಬಂದ ವೇಳೆ ಈ ಅವಘಡ ಸಂಭವಿಸಿದೆ. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿವೆ ಎಂದು ತಿಳಿದುಬಂದಿದೆ.
https://youtu.be/Ybpd5J__WuM