– ಊಟದ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ
ಬೆಂಗಳೂರು: ಇಲ್ಲಿನ ಮಿಂಟೋ ಆಸ್ಪತ್ರೆ (Minto Hospital) ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಈಗ ಊಟದ ಸಮಯ ಎಂದು ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಅಮಾನವೀಯ ವರ್ತನೆ ತೋರಿದ್ದಾರೆ. ಇದರಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆ ಮುಂಭಾಗ ರೋಗಿಗಳು ನರಳಾಡುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇರುವ ಅತಿದೊಡ್ಡ ಕಣ್ಣಿನ ಆಸ್ಪತ್ರೆ (Eye Hospital) ಎಂದರೆ ಅದು ಮಿಂಟೋ ಆಸ್ಪತ್ರೆ. ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ದೂರದ ಊರುಗಳಿಂದ ಜನ ಬರುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ ಆದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡುವುದು ಆಸ್ಪತ್ರೆಗಳ ಕರ್ತವ್ಯ. ಆದರೆ ಕೆ.ಆರ್ ಮಾರ್ಕೆಟ್ ಬಳಿಯ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನು ಮರೆತು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ವೈದ್ಯರು ಊಟ ಮಾಡುವ ಸಮಯ ಎಂದು ರೋಗಿಗಳನ್ನು ಹೊರಗಡೆ ಕಳುಹಿಸಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ
ಮಿಂಟೋ ಆಸ್ಪತ್ರೆಗೆ ಬೀಗ ಹಾಕಿದ ಸಮಯದಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಕೇಸ್ ಬಂದರೂ ಸಹ ಆಸ್ಪತ್ರೆಯ ಬೀಗ ತೆಗೆದು ಚಿಕಿತ್ಸೆ ಕೊಟ್ಟಿಲ್ಲ. ಬದಲಾಗಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿಯೇ ಅಂಬುಲೆನ್ಸ್ ಒಳಗಡೆಯೇ ಚಿಕಿತ್ಸೆ ಕೊಟ್ಟಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿದ ಕಾರಣ ನೂರಾರು ರೋಗಿಗಳು ಆಸ್ಪತ್ರೆ ಮುಂಭಾಗ ಗೇಟ್ ಬಳಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ವೈದ್ಯರ ಬೇಜವಾಬ್ದಾರಿ ನಿರ್ಲಕ್ಷ್ಯಕ್ಕೆ ರೋಗಿಗಳು ನಲುಗಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆ: RSS ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕೆ?
ಆಸ್ಪತ್ರೆಗೆ ಬೀಗ ಹಾಕಿರುವ ಕಾರಣ ನೂರಾರು ರೋಗಿಗಳು ಚಿಕಿತ್ಸೆಗಾಗಿ ಹಂಬಲಿಸುತ್ತಾ ಇದ್ದ ಹಿನ್ನೆಲೆಯಲ್ಲಿ ‘ಪಬ್ಲಿಕ್ ಟಿವಿ’ ವೈದ್ಯರ ನಿರ್ಲಕ್ಷ್ಯ, ಬೇಜವಾಬ್ದಾರಿತನವನ್ನು ಪ್ರಶ್ನೆ ಮಾಡಿದ ಬಳಿಕ ಗೇಟ್ ಓಪನ್ ಮಾಡಿ ರೋಗಿಗಳನ್ನು ಒಳಗಡೆ ಬಿಟ್ಟಿದ್ದಾರೆ. ಇನ್ನು ಈ ಕುರಿತು ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ರೋಗಿಗಳಿಗಿಂತ ಇವರಿಗೆ ಊಟನೇ ಹೆಚ್ಚಾಗಿದೆ. ಊಟದ ಸಮಯ ಎಂದು ಒಂದೂವರೆ ಗಂಟೆ ಆಸ್ಪತ್ರೆಗೆ ಬೀಗ ಹಾಕಿಕೊಂಡರೆ ಎಮರ್ಜೆನ್ಸಿ ಇರುವ ರೋಗಿಗಳ ಪರಿಸ್ಥಿತಿ ಏನಾಗಬೇಡ? ರಸ್ತೆಯಲ್ಲೇ ಚಿಕಿತ್ಸೆ ಕೊಡುತ್ತಿದ್ದಾರೆ. ಐಸಿಯು, ಬೆಡ್ ಬೇಡವೇ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್
ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ನಿಜಕ್ಕೂ ಈ ಆಸ್ಪತ್ರೆ ಮೇಲೆ ನಿಗಾ ವಹಿಸಬೇಕಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ ಇದ್ದರೂ ಈ ರೀತಿ ನಿರ್ಲಕ್ಷ್ಯ ಮಾಡಿ ಬೀಗ ಹಾಕಿ ರಸ್ತೆಯಲ್ಲೆ ಚಿಕಿತ್ಸೆ ಕೊಡೋದು ಎಷ್ಟು ಸರಿ? ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೆ?