Advertisements

ಪಕ್ಷಕ್ಕೆ ಮೋಸ ಮಾಡಲ್ಲ, ಎಲ್ಲಿಂದ್ಲೋ ಬಂದು ಮಂಡ್ಯ ನಮ್ಮದೇ ಅನ್ನೋರಿಗೆ ಮಣೆ ಹಾಕ್ಬೇಡಿ: ಎಸ್‍ಟಿಎಸ್

ಮಂಡ್ಯ: ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಾನು ನನ್ನ ಸ್ವಂತ ಶಕ್ತಿಯಿಂದ ರಾಜಕೀಯ ಪ್ರವೇಶ ಮಾಡಿದೆ. 20-22 ವರ್ಷಗಳ ಕಾಲ ಎಲ್ಲಾ ಹಂತಗಳನ್ನು ಮುಗಿಸಿ ಈ ಹಂತಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಅವರ ಆಶೀರ್ವಾದದಿಂದ ಸಹಕಾರ ಸಚಿವನಾಗಿದ್ದೇನೆ. ನಾನು ಪಕ್ಷಕ್ಕೆ ಮೋಸ ಮಾಡಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

Advertisements

ಮಂಡ್ಯದಲ್ಲಿ ಆಯೋಜಿಸಿದ್ದ ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನಮ್ಮ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನನ್ನ ಬಳಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದಾಕ್ಷಣವೇ ಕೆಲಸದಿಂದ ತೆಗೆಯಲಾಯಿತು. ನಿನ್ನ ಹಣೆಬರಹ, ನೀನುಂಟೂ, ನಿನ್ನ ಚುನಾವಣೆ ಉಂಟು ಎಂದು ಹೇಳಿ ಕಳುಹಿಸಿದೆ ಎಂದರು.

Advertisements

ನಾನು ಸಹಕಾರ ಸಚಿವರಾದ ಬಳಿಕ ನಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರು ನನಗೆ ಕರೆ ಮಾಡಿ, ನಮ್ಮ ಹುಡುಗನೊಬ್ಬನಿದ್ದಾನೆ. ಆತನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ. ಹಿರಿಯರ ಮಾತಿಗೆ ಗೌರವಕೊಟ್ಟು ವಿಶೇಷ ಕರ್ತವ್ಯಾಧಿಕಾರಿಯಾಗಿ ತೆಗೆದುಕೊಳ್ಳಲಾಯಿತು. 7-8 ದಿನದ ಹಿಂದೆ ನನ್ನ ಮನೆಗೆ ಬಂದು ನಾನು ಎಂಎಲ್ ಸಿ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಎಂದರು. ಎಲ್ಲಿಂದ ಎಂದು ಕೇಳಿದ್ದಕ್ಕೆ ಮಂಡ್ಯ ಅಂದರು. ಆಗ ಆಶ್ಚರ್ಯ ಆಯ್ತು. ನಿನಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿ ಕೆಲಸದಿಂದ ತೆರವು ಮಾಡಿದೆ. ಕೂಡಲೇ ಈ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತಂದೆ ಎಂದರು.

ಮಂಡ್ಯದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಾರಾಯಣಗೌಡ ಮಾತನಾಡಿದ್ದರು. ಈ ವಿಚಾರವಾಗಿ ಮೈಸೂರಿನಲ್ಲಿ ಕೂಡ ಪ್ರಸ್ತಾಪವಾಗಿತ್ತು. ಆದರೆ ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿದ ವ್ಯಕ್ತಿ ಇಲ್ಲಿಗೆ ಮತ್ತೊಂದು ಪಕ್ಷದಿಂದ ಅಭ್ಯರ್ಥಿ ಆಗುತ್ತಾರೆ ಎಂಬ ಮುನ್ಸೂಚನೆ ಕೂಡ ಸಿಗಲಿಲ್ಲ. ಇದು ವಾಸ್ತವ. ಕೆಲವರು ಮಂಡ್ಯ ನಮ್ಮದೇ, ಇಲ್ಲಿ ನಾವೇ ಎಂದುಕೊಂಡಿದ್ದಾರೆ. ಎಲ್ಲಿಂದಲೋ ಬಂದು ನಾವೇ ನಾವೇ ಎಂದುಕೊಂಡಿರುವವರನ್ನು ಇಲ್ಲಿಂದ ಹೋಗಿಸುವುದು ನಿಮ್ಮ ಕೈಯಲಿ ಇದೆ ಎಂದು ಮತದಾರರಿಗೆ ಕರೆಕೊಟ್ಟರು.

Advertisements

ಸಹಕಾರ ಇಲಾಖೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಮುಂದೆ ಸೋಮಶೇಖರ್ ಕೂಡ ಕಾಂಗ್ರೆಸ್ಸಿಗೆ ಹೋಗ್ತಾರೆ ಎಂದು ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ವೆಟರ್ನರಿ ಇನ್ಸ್ ಪೆಕ್ಟರ್. ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ನಿಜವಾದ ಮಣ್ಣಿನ ಮಕ್ಕಳು ಸರ್ಕಾರದಲ್ಲಿ ಕೃಷಿ, ಸಹಕಾರ ಇಲಾಖೆ ಕೇಳಬೇಕು. ಆದರೆ ಈ ಎರಡು ಇಲಾಖೆ ಬಿಟ್ಟು ಪಿಡಬ್ಲ್ಯೂಡಿ, ಹಣಕಾಸು, ಇಂಧನ ಇಲಾಖೆ ಕೇಳ್ತಾರಾ ಎಂದು ಪ್ರಶ್ನಿಸಿದರು.

ಅವರು ಮಾತ್ರ ಮಣ್ಣಿನ ಮಕ್ಕಳು, ನಾವು ಮಣ್ಣಿನ ಮಕ್ಕಳಲ್ಲವೇ ಎಂದು ನಾರಾಯಣಗೌಡ ನನ್ನ ಬಳಿ ಬಂದು ಹೇಳಿದಾಗ ನೀನು ಮಣ್ಣಿನ ಮಗನಾದರೆ ಈ ಸರ್ಕಾರ ತೆಗಿ ಎಂದು ತಮಾಷೆಗೆ ಹೇಳಿದೆ. ಆದರೆ ಅದನ್ನು ಮಾಡೇ ಬಿಟ್ಟರು. ನಾವು ಬಾಂಬೆಗೆ ಹೋಗುವುದಕ್ಕೆ ಮುಂಚೆ ಅವರು ಕೂತಿದ್ದರು ಎಂದು ಹಿಂದಿನ ಘಟನಾವಳಿಗಳನ್ನು ನೆನೆಪಿಸಿದರು. ಯಾವುದೇ ಖಾತೆ ಕೊಡಲಿ ಅದಕ್ಕೆ ಜೀವ ತುಂಬಿ ಕೆಲಸ ಮಾಡುವವರು ನಾರಾಯಣಗೌಡ. ಅವರು ಮಂಡ್ಯದಲ್ಲಿ ಸೋಲುತ್ತಾರೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ನಾನು 100% ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಮಂಡ್ಯದ ಜನರ ಪ್ರೀತಿ ವಿಶ್ವಾಸ ಗಳಿಸಿ ಗೆದ್ದು ಬಂದರು. ಇದನ್ನೂ ಓದಿ: ಗೆಹ್ಲೋಟ್ ಸರ್ಕಾರದ ಸಚಿವ ಸಂಪುಟ ಪುನಾರಚನೆ – 15 ಮಂದಿ ಸಂಪುಟ ಸೇರ್ಪಡೆ

ಇದುವರೆಗೆ ಐದು ವಿಧಾನಪರಿಷತ್ ಚುನಾವಣೆ ನೋಡಿದ್ದೇನೆ. ಟಿಕೆಟ್ ಸಿಗಲಿ, ಬಿಡಲಿ ಗ್ರಾಪಂ ಸದಸ್ಯರ ಮನೆಮನೆಗೆ ತೆರಳಿ, ಅವರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸುವ ವ್ಯಕ್ತಿ ಇದ್ದರೆ ಅದು ಮಂಜು ಮಾತ್ರ. ಗ್ರಾಪಂ ಸದಸ್ಯರ ಮೇಲಿನ ಅವರ ಕಾಳಜಿ ನೋಡಿದರೆ ಅವರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಅದೇ ಅಪ್ಪಾಜಿಗೌಡ ಎಂದಾದರೂ ಗ್ರಾಪಂ ಸದಸ್ಯರ ಮನೆಗೆ ಭೇಟಿ ಕೊಟ್ಟಿದ್ದಾರೆಯೇ? ಎಲ್ಲಿ ಸೈಟ್ ಇದೆ, ಎಲ್ಲಿ ಜಮೀನಿದೆ? ಯಾವುದನ್ನು ಮಾರಬೇಕು, ಯಾವುದನ್ನು ಖರೀದಿಸಬೇಕು ಎಂಬುದರ ಕಡೆಯಷ್ಟೇ ವಿಶೇಷ ಗಮನ ಕೊಡುತ್ತಾರೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಶ್ವರಪ್ಪ ಕೊಟ್ಟ ಒಂದು ಹೇಳಿಕೆಯಿಂದ ಸಿದ್ದರಾಮಯ್ಯ 40 ಸಾವಿರ ಮತಗಳ ಅಂತರದಲ್ಲಿ ಸೋತರು. ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರು ರೈತರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಎಲ್ಲಾ ಕಡೆ ಯಶಸ್ವಿಯಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿಗೆ ನೀರು ಬೆರೆಸಿ ಮೋಸದಿಂದ ಸಂಪಾದನೆ ಮಾಡುವುದನ್ನು ಎಲ್ಲೂ ಕಂಡಿಲ್ಲ. ಈ ಕುರಿತು ಸಿಒಡಿ ತನಿಖೆಗೆ ಆದೇಶಿಸಿದ್ದು ಶೀಘ್ರದಲ್ಲೇ ವರದಿ ಕೈ ಸೇರಲಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ : ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಗೆಹ್ಲೋಟ್‌

Advertisements
Exit mobile version