ರಾಮನಗರ: ಮಾನಸಿಕ ಅಸ್ವಸ್ಥ ಹಾಗೂ ವಿಕಲಚೇತನ ಯುವಕನ ಮೇಲಿನ ರಾಮನಗರ ಟೌನ್ ಪೊಲೀಸರ ದೌರ್ಜನ್ಯ, ಹಲ್ಲೆಯನ್ನು ಖಂಡಿಸಿ ಜಿಲ್ಲೆಯಲ್ಲಿ ಇಂದು ಅಲ್ಪಸಂಖ್ಯಾತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದಿಂದ ಟೌನ್ ಪೊಲೀಸ್ ಠಾಣೆಯ ತನಕ ಪ್ರತಿಭಟನಾ ರ‍್ಯಾಲಿ ನಡೆಸಿ ವಿಕಲಚೇತನ ಸೈಯದ್ ತೌಸಿಫ್ ಮೇಲಿನ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳಲ್ಲಿ ನಾಲ್ವರ ಮೇಲೆ ಇದೇ ರೀತಿ ಪೊಲೀಶರು ಹಲ್ಲೆ ನಡೆಸಿದ್ದು, ಇಲಾಖೆಯಿಂದ ಕ್ರಮ ಮಾತ್ರ ಜರುಗಿಸಿಲ್ಲ. ಇದೀಗ ತೌಸಿಫ್ ವಿಕಲಚೇತನ ಹಾಗೂ ಮಾನಸಿಕ ಅಸ್ವಸ್ಥ ಕೂಡಾ ಆಗಿದ್ದು ಆತನ ಮೇಲೆ ಹಲ್ಲೆ ನಡೆಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.
Advertisement
Advertisement
ಇನ್ನೂ ಇದೇ ಪ್ರಕರಣದ ವಿಚಾರವಾಗಿ ಈಗಾಗಲೇ ರಾಜ್ಯ ಅಲ್ಪಸಂಖ್ಯಾತರ ಆಯೋಗವು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 7 ದಿನಗಳಲ್ಲಿ ವರದಿ ನೀಡುವಂತೆ ನೋಟಿಸ್ ನೀಡಿದ್ದಾರೆ.
Advertisement
ಸೈಯದ್ ತೌಸಿಫ್ ರಾಮನಗರದ ಯಾರಬ್ ನಗರದ ನಿವಾಸಿಯಾಗಿದ್ದಾನೆ. ತಂದೆಯ ಜೊತೆ ಗ್ಯಾರೇಜ್‍ನಲ್ಲಿ ಕೆಲಸ ಮಾಡಿ ಮನೆಗೆ ತೆರಳುತ್ತಿದ್ದ ತೌಸಿಫ್, ಕಳೆದ ಭಾನುವಾರ ರಾತ್ರಿ ನಗರಸಭೆ ಮುಂಭಾಗದಲ್ಲಿನ ಬಾಲಕಿಯರ ಹಾಸ್ಟೆಲ್ ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾನೆ. ಈ ವೇಳೆ ಗಸ್ತಿನಲ್ಲಿದ್ದ ಮೂವರು ಪೊಲೀಸ್ ಪೇದೆಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತೌಸಿಫ್‍ನ ಪೋಷಕರು ಆರೋಪಿಸಿದ್ದಾರೆ.
Advertisement
ತೌಸಿಫ್‍ನ ಪೃಷ್ಠದ ಭಾಗ ಹಾಗೂ ಎರಡು ಕಾಲುಗಳು ಲಾಠಿಯಿಂದ ಹೊಡೆದಿರುವುದರಿಂದ ನೀಲಿಗಟ್ಟಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ಕೂಡ ದಾಖಲಾಗಿದ್ದನು. ಈ ಘಟನೆ ಸಂಬಂಧ ಪೊಲೀಸರು ತಾವು ಹಲ್ಲೆ ನಡೆಸಿಲ್ಲ, ಆತ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದು ಈ ವೇಳೆ ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ ಎಂದು ಹೇಳಿದ್ದಾರೆ.