– ಅಪಘಾತದ ವಿಡಿಯೋ ವೈರಲ್
ಗುವಾಹಟಿ: ದೇಶದಲ್ಲೇ ಅತ್ಯಂತ ಉದ್ದವಾಗಿರುವ ಅಸ್ಸಾಂನ ಬೋಗಿಬೆಲ್ ಸೇತುವೆಯನ್ನು ನೋಡುವ ಸಂಭ್ರಮದಲ್ಲಿ 7 ವರ್ಷದ ಬಾಲಕನೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿದ್ದು, ಅಪಘಾತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತಪಟ್ಟ ಬಾಲಕನನ್ನು ಸೌರಭ್ ಮೋರನ್ ಎಂದು ಗುರುತಿಸಲಾಗಿದ್ದು, ಈತ ತಿನ್ಸುಕ್ ಬಾಘಜನ್ನ ಗ್ರಾಮದ ನಿವಾಸಿಯಾಗಿದ್ದಾನೆ. ಹೊಸದಾಗಿ ಉದ್ಘಾಟನೆಗೊಂಡಿದ್ದ ಸೇತುವೆಯನ್ನು ನೋಡಲು ಬಾಲಕ ತನ್ನ ಕುಟುಂಬದೊ0ದಿಗೆ ಆಗಮಿಸಿದ್ದನು. ಸೇತುವೆಯ ಇನ್ನೊಂದು ಬದಿಗೆ ಹೋಗಲು ರಸ್ತೆ ಮೇಲೆ ಏಕಾಏಕಿ ಓಡಿದ್ದಾನೆ. ಈ ವೇಳೆ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದನು. ಕೂಡಲೇ ಬಾಲಕನನ್ನು ದಿಬ್ರುಘರ್ನ ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಬಾಲಕ ಮಾರ್ಗಮಧ್ಯೆಯೇ ಅಸುನೀಗಿದ್ದಾನೆ.
ಇದೇ ಕ್ರಿಸ್ಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನ ಬೋಗಿಬೆಲ್ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ಆದರೆ ಇಂದು ಸೇತುವೆ ನೋಡುವ ಭರದಲ್ಲಿ ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಬಾಲಕನಿಗೆ ಕಾರು ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಓದಿ: ದೇಶದ ಉದ್ದದ ರೈಲು, ರಸ್ತೆ ಸೇತುವೆ ಉದ್ಘಾಟಿಸಿ ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟ ಮೋದಿ
ವಿಡಿಯೋದಲ್ಲಿ ಏನಿದೆ?
ಕಾರಿನಲ್ಲಿದ್ದ ಪ್ರಯಾಣಿಕರು ಸೇತುವೆ ಮೇಲಿನ ತಮ್ಮ ಮೊದಲ ಪ್ರಯಾಣವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರು. ಈ ವೇಳೆ ರಸ್ತೆಯ ಬದಿ ನಿಂತಿದ್ದ ಮತ್ತೊಂದು ಕಾರಿನ ಮುಂಭಾಗದಿಂದ ಬಾಲಕನೋರ್ವ ಏಕಾಏಕಿ ಬಲಬದಿಗೆ ಓಡಿ ಬಂದಿದ್ದಾನೆ. ಕಾರ್ ಅಡ್ಡ ಇದ್ದ ಕಾರಣ ಚಾಲಕನಿಗೆ ಬಾಲಕ ಬಂದಿದ್ದು ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಕಾರ್ ಬಾಲಕನಿಗೆ ಗುದ್ದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv