ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊಟ್ಟ ಮಾತನ್ನು ತಪ್ಪದೆ ಗಡಿಗ್ರಾಮ ಗೋಪಿನಾಥಂ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.
ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆ ಆರಂಭಿಸಲು ಆದೇಶ ನೀಡಿದ್ದಾರೆ. ನವೆಂಬರ್ 18ರಂದು ಶಾಲಾ ವಾಸ್ತವ್ಯ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು.
ಪ್ರಸ್ತುತ 1ರಿಂದ 4ನೇ ತರಗತಿವರೆಗೆ ತಮಿಳು ಮಾಧ್ಯಮ, 5 ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಯುತ್ತಿದೆ. 5ನೇ ತರಗತಿಯಿಂದ ಕನ್ನಡ ಮಾಧ್ಯಮದಲ್ಲಿ ಕಲಿಯಲು ಕಷ್ಟವೆಂದು ವಿದ್ಯಾರ್ಥಿಗಳು ಸಚಿವರ ಬಳಿ ಹೇಳಿಕೊಂಡಿದ್ದರು. ಈಗ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ್ದಾರೆ.
ಸುರೇಶ್ ಕುಮಾರ್ ವಾಸ್ತವ್ಯ ಮಾಡಿದ ಎರಡೇ ವಾರದಲ್ಲಿ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ. 2020-21ನೇ ಸಾಲಿನಿಂದ ಕನ್ನಡ ಮಾಧ್ಯಮದಲ್ಲಿ ಶಾಲೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಿಡಿಪಿಐಗೆ ಆದೇಶ ನೀಡಿದ್ದಾರೆ.