ಇಡೀ ದೇಶವೇ ಕೊರೋನ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಮಯ. ಅಂತಹ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆಯುತ್ತಾರೆ. ಆಕೆ ಪರೀಕ್ಷೆ ಬರೆಯಲು ಮುಖ್ಯ ಕಾರಣ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ್ ಭಟ್ ರವರು ಹಾಗೂ ಪ್ರದೀಪ್ ಈಶ್ವರ್. ಇವರೆಲ್ಲರ ಸಹಾಯದಿಂದ ತನುಜಾ ನೀಟ್ ಪರೀಕ್ಷೆ ಬರೆದು, ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ. ಈ ವಿಷಯವನ್ನಿಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ ಚಿತ್ರ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ವೈದ್ಯಕೀಯ ಸಚಿವರಾದ ಸುಧಾಕರ್ “ತನುಜಾ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಪತ್ರಕರ್ತರಾದ ವಿಶ್ವೇಶ್ವರ ಭಟ್ ರವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement
ನಾನು ಸಮಾನ್ಯವಾಗಿ ಎಲ್ಲರ ಟ್ವಿಟ್ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವಿಟ್ ಮಾಡಿದ್ದನ್ನು ಗಮನಿಸಿ, ಆ ಹುಡುಗಿ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರವಂತೂ ಅಪಾರ. ಆಮೇಲೆ ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ, ತನುಜಾ ಕುರಿತಾದ ಸಿನಿಮಾ ಮಾಡುತ್ತಿದ್ದಾರೆ ಎಂದರು. ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದರು. ಡಾಕ್ಟರ್ ಆಗಿರುವ ನನ್ನನ್ನು ಆಕ್ಟರ್ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆ ತನುಜಾ ಅಂದುಕೊಂಡಿದ್ದನ್ನು ಸಾಧಿಸಿ ವೈದ್ಯೆ ಆಗುತ್ತಿದ್ದಾಳೆ. ಈ ಸಿನಿಮಾ “ತನುಜಾ” ಕೂಡ ಯಶಸ್ವಿಯಾಗಲಿ ಎಂದು ಸಚಿವ ಸುಧಾಕರ್ ಹಾರೈಸಿದರು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
Advertisement
Advertisement
ನನ್ನ ಪರಿಚಯದವರೊಬ್ಬರಿಂದ ಕೋವಿಡ್ ಸಮಯದಲ್ಲಿ ತನುಜಾ ಪರೀಕ್ಷೆ ಬರೆಯಲು ಮುಂದಾಗಿರುವ ವಿಷಯ ತಿಳಿಯಿತು. ತಕ್ಷಣ ನಾನು ಈ ವಿಷಯದ ಕುರಿತು ಟ್ವಿಟ್ ಮಾಡಿದೆ. ತನುಜಾ ತಾಯಿ ಸಹ ನನಗೆ ಫೋನ್ ಮಾಡಿ ಮಗಳು ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಕೇಳಿಕೊಂಡರು. ನನ್ನ ಟ್ವಿಟ್ ಗೆ ಕೊರೋನ ಅಂತಹ ಕಷ್ಟ ಸಮಯದಲ್ಲಿ, ಅದರಲ್ಲೂ ಅವರೆ ಆರೋಗ್ಯ ಸಚಿವರಾಗಿ ಸಾಕಷ್ಟು ಒತ್ತಡವಿದ್ದರೂ ನನ್ನ ಮನವಿಗೆ ಸ್ಪಂದಿಸಿ ತನುಜಾ ನೀಟ್ ಪರೀಕ್ಷೆ ಬರೆಯಲು ಸುಧಾಕರ್ ಸಹಾಯ ಮಾಡಿದರು. ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಆ ಹುಡಿಗಿಗೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ನಾನು ಈ ಘಟನೆಯನ್ನು ಅಂಕಣದಲ್ಲಿ ಬರೆದುಕೊಂಡಿದ್ದೆ. ಅಂಕಣ ಓದ್ದಿದ ಹರೀಶ್ ಚಿತ್ರ ಮಾಡಲು ಮುಂದಾದರು. ಕಷ್ಟಪಟ್ಟು ನಿರ್ಮಾಪಕರನ್ನು ಹುಡುಕಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಎಂದರು ಪತ್ರಕರ್ತ ವಿಶ್ವೇಶ್ವರ ಭಟ್.
Advertisement
“ತನುಜಾ” ನಿಜಕ್ಕೂ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು ನಟಿ ಸಪ್ತ ಪಾವೂರ್. ನಟ ರಾಜೇಶ್ ನಟರಂಗ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ತನುಜಾ ತಾಯಿ ಹಿರಿಯಮ್ಮ ಅವರು ಸಮಾರಂಭಕ್ಕೆ ಆಗಮಿಸಿ, ಮಗಳು ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ಸಕಲರಿಗೂ ಧನ್ಯವಾದ ತಿಳಿಸಿದರು. ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.