ಬೆಂಗಳೂರು: ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋಧಿ ಪೂರೈಕೆಯನ್ನು ನಿಲ್ಲಿಸಿದ್ದು ನಮ್ಮ ಸರ್ಕಾರವಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಿಂತು ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಮಾಜಿ ಸಚಿವ ಯು.ಟಿ.ಖಾದರ್ ಆರೋಪಕ್ಕೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಶಿಕಲಾ ಜೊಲ್ಲೆ ಅವರು, ನಮ್ಮ ಸರ್ಕಾರ ಬಂದ ಮೇಲೆ ಸಿದ್ದಗಂಗಾ ಮಠಕ್ಕೆ ಅಕ್ಕಿ-ಗೋಧಿ ಪೂರೈಕೆ ನಿಲ್ಲಿಸಿಲ್ಲ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಈ ಪೂರೈಕೆ ನಿಂತಿತ್ತು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಎರಡು ತಿಂಗಳಿಂದ ರೇಷನ್ ಬಂದಿಲ್ಲ- ಸಿದ್ದಗಂಗಾ ಶ್ರೀ ಸ್ಪಷ್ಟನೆ
Advertisement
Advertisement
464 ಸಂಸ್ಥೆಗಳಿಗೆ ದಾಸೋಹ ಯೋಜನೆ ಇತ್ತು. ಇದರಲ್ಲಿ 183 ಸರ್ಕಾರಿ ಸಂಸ್ಥೆಗಳಿವೆ. ಉಳಿದ 281 ಖಾಸಗಿ ಸಂಸ್ಥೆಗಳಿಗೆ ಮಾತ್ರ ಅನುದಾನ ನಿಲ್ಲಿಸಲಾಗಿದೆ. ಇದರಲ್ಲಿ ಸಿದ್ದಗಂಗಾ ಮಠವೂ ಇದೆ. ಶ್ರೀಗಳು ಹಿಂದೆಯೇ ಪತ್ರ ಬರೆದಿದ್ದರು. ಪತ್ರ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರದಿಂದಲೇ ರೇಷನ್ ಕೊಡಲು ನಿರ್ಧರಿಸಿದ್ದೇವೆ ಎಂದರು.
Advertisement
ಖಾಸಗಿ ಸಂಸ್ಥೆಗಳ ದಾಸೋಹ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದು ಮೂರು ತಿಂಗಳಿನಿಂದ ನಿಲ್ಲಿಸಿರುವುದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅನುದಾನ ನಿಲ್ಲಿಸಲಾಗಿತ್ತು. ಈಗ ಫೈಲ್ ತರಿಸಿಕೊಂಡು ಮತ್ತೆ ರಾಜ್ಯ ಸರ್ಕಾರದಿಂದಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ. ಖಾಸಗಿ ಸಂಸ್ಥೆಗಳಿಗೆ ಅಕ್ಕಿ, ಗೋದಿ ಪೂರೈಕೆಗೆ 12.50 ಕೋಟಿ ರೂ. ಮಾತ್ರ ಅಗತ್ಯ ಇದೆ. ಈಗಾಗಲೇ ಸಿಎಂ ಜತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅಕ್ಕಿ, ಗೋಧಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದರು.
Advertisement
ರಾಜ್ಯದಲ್ಲಿ 183 ಸಂಸ್ಥೆಗಳಿಗೆ ಸರ್ಕಾರದಿಂದ ಅಕ್ಕಿ, ಗೋಧಿ ಪೂರೈಕೆ ಮಾಡುತ್ತಿದ್ದೇವೆ. ಆದರೆ 281 ಖಾಸಗಿ ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಅಕ್ಕಿ, ಗೋಧಿ ಪೂರೈಕೆ ನಿಲ್ಲಿಸುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿತ್ತು. ಹೀಗಾಗಿ ನಿಲ್ಲಿಸಲಾಗಿತ್ತು. ಆದರೆ ಇನ್ನುಮುಂದೆ ಉಳಿದ ಎಲ್ಲ 281 ಖಾಸಗಿ ಸಂಸ್ಥೆಗಳಿಗೂ ರೇಷನ್ ಪೂರೈಕೆ ಮಾಡುತ್ತೇವೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಇದಕ್ಕೆ ವಾರ್ಷಿಕ 12.50 ಕೋಟಿ ರೂ. ಖರ್ಚು ಆಗುತ್ತದೆ. ಈ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.