– ರಮೇಶ್ ಜಾರಕಿಹೊಳಿ ಲೋಕಸಭೆ ಟಿಕೆಟ್ ಕೇಳಿದ್ರೆ ನಾಯಕರು ಕೊಡ್ತಾರೆ
ಧಾರವಾಡ: ನಾನೇನು ಸಹೋದರ ರಮೇಶ್ ಜಾರಕಿಹೊಳಿ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡಿಲ್ಲ. ಮೈತ್ರಿ ಸರ್ಕಾರ, ಪಕ್ಷದ ನಾಯಕರೇ ನನಗೆ ಮಂತ್ರಿಗಿರಿ ನೀಡಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್‍ನ ಅತೃಪ್ತ ಶಾಸಕರು ನಮ್ಮೊಂದಿಗೆ ಇದ್ದಾರೆ. ನಮ್ಮೊಂದಿಗೆಯೇ ಇರುತ್ತಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಲೋಕಸಭಾ ಟಿಕೆಟ್ ಕೇಳಿದರೆ ಪಕ್ಷದ ನಾಯಕರು ಕೊಡುತ್ತಾರೆ. ಅದೇನು ದೊಡ್ಡ ವಿಷಯ ಅಲ್ಲವೇ ಅಲ್ಲ. ಶಾಸಕರ ಸಮಸ್ಯೆಯನ್ನು ಪಕ್ಷದ ವರಿಷ್ಠರೇ ಬಗೆಹರಿಸುತ್ತಾರೆ ಎಂದು ಸಹೋದರ ರಮೇಶ್ ಜಾರಕಿಹೊಳಿ ಅವರ ಪರ ಬ್ಯಾಟ್ ಬೀಸಿದರು.
ಪುಲ್ವಾಮಾದಲ್ಲಿ ಉಗ್ರರ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇಡೀ ದೇಶವೇ ದಾಳಿಯನ್ನು ಖಂಡಿಸುತ್ತಿದೆ. ಮುಂದೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿ ಜಿಲ್ಲೆಯ ಯುವತಿ ದೇಶದ್ರೋಹದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ. ದೇಶದ್ರೋಹ ನಡೆಯಿಂದಾಗಿ ಕೆಲವರು ಯುವತಿಯ ಮನೆಯ ಮೇಲೆ ಕಲ್ಲು ತೂರಿ, ಹಾನಿ ಮಾಡಿದ್ದಾರೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನು ಓದಿ: ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ ಪೊಲೀಸರ ವಶಕ್ಕೆ- ಮನೆಗೆ ಬೆಂಕಿ
ಅರಣ್ಯ ಇಲಾಖೆ ಸಿಬ್ಬಂದಿ ವೇತನ ತಾರತಮ್ಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ತಾರತಮ್ಯವನ್ನು ಸರಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv