ಬೆಂಗಳೂರು: ಭಾನುವಾರವಷ್ಟೇ ಸಚಿವ ರೇವಣ್ಣ ಅವರು ಕಟೀಲು ದೇವಾಲಯದಲ್ಲಿ ಪತ್ರಕರ್ತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಇದೀಗ ಸಚಿವ ಸಾ.ರಾ ಮಹೇಶ್ ಕೂಡ ಮಾಧ್ಯಮಗಳ ಮೇಲೆ ಆಕ್ರೋಶಗೊಂಡಿದ್ದಾರೆ.
ಕೆ.ಕೆ ಗೆಸ್ಟ್ ಹೌಸ್‍ನಲ್ಲಿ ಬಿಜೆಪಿ ಭೇಟಿ ಬಗ್ಗೆ ಸಾ.ರಾ ಮಹೇಶ್ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು. ಈ ವೇಳೆ ಸಿಟ್ಟಾದ ಮಹೇಶ್, ಎಷ್ಟು ಬಾರಿ ಹೇಳುವುದು ನಿಮಗೆ. ಒಂದು ಸಲ ಹೇಳಿದರೆ ಅರ್ಥ ಆಗಲ್ವ ಎಂದು ಕೈ ಬೆರಳು ತೋರಿಸಿ ಸಿಟ್ಟಿನಿಂದ ವಿಧಾನಸಭೆಯೊಳಗೆ ಹೋದರು. ಇದನ್ನೂ ಓದಿ: ಕಟೀಲು ದೇವಾಲಯದಲ್ಲಿ ಪತ್ರಕರ್ತರಿಗೆ ಅವಾಚ್ಯ ಪದಗಳಿಂದ ಬೈದ ರೇವಣ್ಣ
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾರಾ ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು. ಈ ಬಗ್ಗೆ ಇಂದು ಸಾ.ರಾ.ಮಹೇಶ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಮಾಧ್ಯಮಗಳ ಮೇಲೆ ಗರಂ ಆದರು.
ಒಂದೆಡೆ ಅತೃಪ್ತ ಶಾಸಕರು ಮುಂಬೈನಿಂದ ಬರುತ್ತಿಲ್ಲ. ಇತ್ತ ಇಲ್ಲಿನ ಅತೃಪ್ತ ಶಾಸಕರನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಸಫಲವಾಗಿಲ್ಲ. ಈ ಎಲ್ಲ ಒತ್ತಡದಲ್ಲಿರುವ ದೋಸ್ತಿನಾಯಕರು ಹತಾಶೆಯಿಂದ ಮಾಧ್ಯಮದವರ ಮೇಲೆ ಸಿಟ್ಟಾಗುತ್ತಿದ್ದಾರಾ ಎಂಬ ಪ್ರಶ್ನೆ ಕಾಡಿದೆ.