ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ ದೇಶಪಾಂಡೆಯವರು ತಮ್ಮ ಆಪ್ತರ ಮನೆಗಳನ್ನ ಉಳಿಸಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುವ ಮಂಗಳೂರಿನಿಂದ ಗೋವಾದವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ರಸ್ತೆಯ ಮಾರ್ಗವನ್ನ ಬದಲಿಸಿದ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿ ನೆಡೆಯುತ್ತಿದೆ. ಜಿಲ್ಲೆಯ ಕುಮಟಾದ ಮಾನಿರ್ ನಿಂದ ಹಂದಿಗೋಣದವರೆಗೆ ಬೈಪಾಸ್ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳಿಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಕೇಂದ್ರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿಗದಿ ಮಾಡಿದಂತೆ ರಸ್ತೆ ಅಗಲೀಕರಣ ಕಾಮಗಾರಿ ನೆಡೆಯುತಿತ್ತು. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕುಮಟಾ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಪ್ರಾಧಿಕಾರ ಹೊರಟಿದ್ದು ಇದರಿಂದಾಗಿ ಮೂರು ಸಾವಿರ ಜನರು ತಮ್ಮ ಮನೆ ಹಾಗೂ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
Advertisement
ಈ ಹಿಂದೆ ನಿಗದಿ ಮಾಡಿದ ಸ್ಥಳದಲ್ಲಿ ಸಾಕಷ್ಟು ಜಾಗಗಳಿದ್ದರೂ ಈ ಭಾಗದಲ್ಲಿ ಸಚಿವರ ಆಪ್ತರ ಹೋಟೆಲ್ ಮತ್ತು ಮನೆಗಳಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಇವುಗಳ ರಕ್ಷಣೆಗೆ ನಿಲ್ಲುವ ಮೂಲಕ ಸಾವಿರಾರು ಬಡ ಜನರನ್ನ ನಿರಾಶ್ರಿತರನ್ನಾಗಿ ಮಾಡುತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡ ಜಾಗದಲ್ಲಿ ಚತುಷ್ಪತ ರಸ್ತೆ ಕಾಮಗಾರಿ ನೆಡೆಸಲು ಅವಕಾಶಗಳಿವೆ. ಈ ಬಗ್ಗೆ ಸ್ವತಃ ಪ್ರಾಧಿಕಾರ ಹೆಚ್ಚಿನ ಸ್ಥಳವಿರವ ಬಗ್ಗೆ ಮಾಹಿತಿ ನೀಡಿದೆ. ಆದ್ರೆ ಕುಮಟಾ ತಾಲೂಕಿನ ಹಂದಿಗೋಣ, ಸೋಕನಮಕ್ಕಿ, ಬಗ್ಗೋಣ ಸೇರಿದಂತೆ ಒಟ್ಟು ಎಂಟು ಗ್ರಾಮಗಳನ್ನೊಳಗೊಂಡ ಈ ಭಾಗದಲ್ಲಿ ಬೈಪಾಸ್ ನಿರ್ಮಿಸಲು ಪ್ರಾಧಿಕಾರ ಹೊಸದಾಗಿ ಸರ್ವೇಗೆ ಮುಂದಾಗಿದೆ. ಹೀಗಾಗಿ ಇದನ್ನ ಕೂಡಲೇ ಕೈಬಿಟ್ಟು ಹಿಂದೆ ಗುರುತಿಸಿದ ಜಾಗದಲ್ಲೇ ರಸ್ತೆ ನಿರ್ಮಾಣ ಮಾಡಿ ಈ ಗ್ರಾಮದ ರೈತರನ್ನ ರಕ್ಷಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
Advertisement
ಈ ಹಿಂದೆ ಗುರುತಿಸಲ್ಪಟ್ಟ ಜಾಗದಲ್ಲಿ ಹೋಟೆಲ್ ಸೇರಿದಂತೆ ವಾಣಿಜ್ಯ ಕಟ್ಟಡಗಳಿವೆ. ಇವು ಸಚಿವರ ಆಪ್ತ ವಲಯದವರದ್ದಾಗಿದೆ. ಹೀಗಾಗಿ ತಮ್ಮ ಪ್ರಭಾವ ಬಳಸಿ ಸಚಿವರಿಗೆ ಒತ್ತಡ ತಂದು ಹೆದ್ದಾರಿಯ ಮಾರ್ಗವನ್ನ ಬದಲಿಸಿದ್ದಾರೆಂಬುದು ಸ್ಥಳೀಯರ ಆರೋಪ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮನವಿ ಕೂಡ ಮಾಡಿಕೊಂಡಿದ್ದಾರೆ ಅಲ್ಲಿನ ಗ್ರಾಮಸ್ಥರು. ಜಿಲ್ಲಾಡಳಿತ ಮುಂದೆ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.