ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ (KSRTC Bus) ಮೇಲಿನ ಟ್ರಾಫಿಕ್ ಫೈನ್ ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವರು ಪತ್ರ ಬರೆದಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ 13 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ. ಬಸ್‌ಗಳ ಮೇಲೆ ಒಟ್ಟು 2,69,198 ಪ್ರಕರಣಗಳಿವೆ. ಶೇ.50 ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಫೈನ್ 6,64,96,400 ರೂ. ಆಗುತ್ತದೆ. ಆದರೆ, ಈ ದಂಡವನ್ನು ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಒಟ್ಟು 24,000 ಬಸ್‌ಗಳಿವೆ. ಕೆಲ ವೇಳೆ ಸಿಸಿಟಿವಿಯಲ್ಲಿ ತಪ್ಪಾಗಿ ರೆಕಾರ್ಡ್ ಆಗಿದೆ. ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದಾಗ, 1,95,009 ಪ್ರಕರಣಗಳು Lane Discipline Violationಗೆ ಸಂಬಂಧಿಸಿದ್ದು. ವಾಹನಗಳು ಲೇನ್‌ನಲ್ಲಿ ಚಲಿಸುವಾಗ ಲೇನ್ ಪಟ್ಟಿಗಳನ್ನು ಸ್ವಲ್ಪ ತಾಗಿದರೂ ಸಹ ಸದರಿ ಸ್ಥಳದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಲೇನ್ ಉಲ್ಲಂಘನೆ ಎಂದು ದಂಡ ವಿಧಿಸಲಾಗುತ್ತಿದೆ.
58,499 ಪ್ರಕರಣಗಳು ಸೀಟ್ ಬೆಲ್ಟ್ ಧರಿಸದೇ ಇರುವ ಬಗ್ಗೆ ದಾಖಲಾಗಿದೆ. ಸೀಲ್ಟ್ ಬೆಲ್ಟ್ ಹಾಕಿದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ನಿಯಮದಂತೆ ಒಂದು ಅಪರಾಧಕ್ಕೆ ಸಂಬಂಧಪಟ್ಟಂತೆ 24 ಗಂಟೆಯ ಅವಧಿಯಲ್ಲಿ ಒಂದು ಬಾರಿ ದಂಡ ವಿಧಿಸಿ ರಶೀದಿ ಪಡೆದಿದ್ದಲ್ಲಿ ಬೇರೊಂದು ಕಡೆ ಸದರಿ ರಸೀದಿ ತೋರಿದಲ್ಲಿ ಪುನಃ ವಿಧಿಸಿರುವ ದಂಡದಿಂದ ವಿನಾಯಿತಿ ಇರುತ್ತಿತ್ತು. ಆದರೆ, ಪ್ರಸ್ತುತ ಹೈವೇಯಲ್ಲಿ ಜಿಲ್ಲಾವಾರು ಪ್ರಕರಣಗಳು ದಾಖಲಾಗುತ್ತಿವೆ. ಉದಾಹರಣೆಗೆ, ಒಂದೇ ದಿನದಲ್ಲಿ ರಾಮನಗರ, ಮಂಡ್ಯ, ಮೈಸೂರು ಜಿಲ್ಲಾವಾರು ಒಂದೇ ವಾಹನಕ್ಕೆ ಒಂದೇ ತರಹದ ಉಲ್ಲಂಘನೆಗೆ ದಂಡಗಳನ್ನು ಹಾಕಲಾಗಿದೆ. ಒಟ್ಟು 2,69,198 ಪ್ರಕರಣಗಳ ಪೈಕಿ 2,53,508 ಪ್ರಕರಣಗಳು ಮೇಲಿನ ಎರಡು ವಿಧವಾದ ಪ್ರಕರಣಗಳಿಂದ ಕೂಡಿರುತ್ತದೆ.
ಪ್ರಮುಖ ವಿಚಾರಗಳನ್ನು ಗೃಹ ಸಚಿವರ ಗಮನಕ್ಕೆ ತಂದು ದಂಡವನ್ನು ಮನ್ನಾ ಮಾಡುವಂತೆ ಸಾರಿಗೆ ಸಚಿವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.