– ಗ್ಯಾರಂಟಿ ಯೋಜನೆ ನಿಲ್ಲಿಸಬೇಕು ಎಂದಿದ್ದ ಕಾಂಗ್ರೆಸ್‌ನ ಲಕ್ಷ್ಮಣ್ ಹೇಳಿಕೆಗೆ ಸಚಿವರ ಪ್ರತಿಕ್ರಿಯೆ
ಬೆಂಗಳೂರು: ಗ್ಯಾರಂಟಿಗಳನ್ನು (Guarantee Scheme) ಮತ ಪಡೆಯಲು ನೀಡಿಲ್ಲ. ಶಕ್ತಿ ಯೋಜನೆಯನ್ನು (Shakti Scheme) ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟಪಡಿಸಿದರು.
ಮೈಸೂರು-ಕೊಡಗು ಲೋಕಸಭಾ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ, ಸಾಮೂಹಿಕವಾಗಿ ಗ್ಯಾರಂಟಿ ಯೋಜನೆ ಕೊಡುವುದನ್ನು ನಿಲ್ಲಿಸೋದೆ ಒಳಿತು: ಎಂ.ಲಕ್ಷ್ಮಣ್
ಗ್ಯಾರಂಟಿಗಳನ್ನು ಮತ ಪಡೆಯಲು ನೀಡಿಲ್ಲ. ಮೋದಿಯವರ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಸಹಾಯವಾಗಲು, ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಾಯವಾಗಲು ಗ್ಯಾರಂಟಿ ತಂದಿದ್ದೇವೆ. ಗ್ಯಾರಂಟಿಗೂ ಮತಕ್ಕೂ ಸಂಬಂಧವಿಲ್ಲ. ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬಜೆಟ್‌ನಲ್ಲಿ 5,500 ಕೋಟಿಯನ್ನು ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ನಮ್ಮ ಸರ್ಕಾರ ಇರೋವರೆಗೂ ಶಕ್ತಿ ಯೋಜನೆ ಇರುತ್ತದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಆಗಲೂ ಶಕ್ತಿ ಯೋಜನೆ ಇರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯ ಸಂವಿಧಾನ ವಿರೋಧಿ ನೀತಿಗಳಿಗೆ ಜನ ಎಚ್ಚರಿಕೆ ನೀಡಿದ್ದಾರೆ: ಹೆಚ್.ಸಿ.ಮಹದೇವಪ್ಪ
ರಾಜ್ಯದಲ್ಲಿ ಬಸ್ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿ, ಮಾದರಿ ನೀತಿ ಸಂಹಿತೆ ಇರುವುದರಿಂದ ಈ ಬಗ್ಗೆ ಚರ್ಚೆಯಾಗಿಲ್ಲ. ಬಸ್ ನಿಗಮಗಳಿಂದ ಇದುವರೆಗೂ ಸರ್ಕಾರಕ್ಕೆ ಪ್ರಸ್ತಾವನೆ ಬಂದಿಲ್ಲ. ಇಂಧನ ಮತ್ತು ಬಿಡಿಭಾಗಗಳ ಬೆಲೆ ಹೆಚ್ಚಾಗಿದೆ. ಮೊದಲು ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ. ನಂತರದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸತ್ತೇವೆ ಎಂದು ಹೇಳಿದರು.